ನವದೆಹಲಿ: ಏರ್ ಇಂಡಿಯಾ ವಿಮಾನದ ಪೈಲಟ್ ತರಬೇತಿಗೆ ಬಂದಿದ್ದ ಯುವಕನೊಬ್ಬ ಹೋಟೆಲ್ ರೂಂ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಖಾಸಗಿ ಹೋಟೆಲ್ ರೂಮ್ ನಲ್ಲಿ ಪೈಲಟ್ ಶವವಾಗಿ ಪತ್ತೆಯಾಗಿದ್ದಾನೆ. ಮುಂಬೈ ಮೂಲದ ಇವರು ಅತ್ಯಾಧುನಿಕ ‘ಬೋಯಿಂಗ್ 787’ ವಿಮಾನ ಚಾಲನಾ ತರಬೇತಿಗಾಗಿ ದೆಹಲಿಗೆ ಬಂದಿದ್ದರು. ಘಟನೆಯಲ್ಲಿ ಯಾವುದೇ ಕೊಲೆ ಅಥವಾ ಸಂಚಿನಂತಹ ಕೃತ್ಯಗಳು ನಡೆದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ತರಬೇತಿ ಪೈಲಟ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಹಿಂದೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೈಲಟ್, ಇತ್ತೀಚೆಗಷ್ಟೇ ಏರ್ ಇಂಡಿಯಾಕ್ಕೆ ವರ್ಗಾವಣೆಯಾಗಿದ್ದರು. ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದ ಪರಿವರ್ತನೆ ತರಬೇತಿಗಾಗಿ ಸೆಪ್ಟೆಂಬರ್ 10 ರಂದು ದೆಹಲಿಗೆ ಬಂದು ವಸಂತ್ ಕುಂಜ್ ಹೋಟೆಲ್‌ನಲ್ಲಿ ತಂಗಿದ್ದರು.
ಪೈಲಟ್ ಕುಟುಂಬದವರು ಮೊಬೈಲ್ ಕರೆ ಮಾಡಿದಾಗ ಅವರು ಸ್ಪಂದಿಸುತ್ತಿರಲಿಲ್ಲ. ಗಾಬರಿಗೊಂಡ ಅವರ ಸಹೋದರ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮ್ಯಾನೇಜರ್ ರೂಮ್ ಗೆ ಹೋಗಿ ನೋಡಿದಾಗ ಒಳಗಿನಿಂದ ರೂಮ್ ಲಾಕ್ ಆಗಿತ್ತು. ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪೈಲಟ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತರಬೇತಿ ಪೈಲಟ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಿಬ್ಬಂದಿ ನಿಧನಕ್ಕೆ ಏರ್ ಇಂಡಿ ಸಂಸ್ಥೆ ತೀವ್ರ ಸಂತಾಪ ಸೂಚಿಸಿದೆ. ಆಘಾತ ವ್ಯಕ್ತಪಡಿಸಿದೆ.
ಸಂಕಷ್ಟದಲ್ಲಿರುವ ಪೈಲಟ್ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದೆ. ಅಪರಾಧ ವಿಭಾಗದ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಹೋಟೆಲ್ ಕೋಣೆಯನ್ನು ತಪಾಸಣೆ ನಡೆಸಿದ್ದು, ಯಾವುದೇ ಬಲವಂತದ ಪ್ರವೇಶ ಅಥವಾ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಸೆಪ್ಟೆಂಬರ್ 12 ರಂದು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ವೈದ್ಯಕೀಯ ವರದಿ ಬಂದ ಬಳಿಕ ತಿಳಿಯಲಿದೆ.
ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194 ರ ಅಡಿಯಲ್ಲಿ ತನಿಖಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದ್ದು, ಪೈಲಟ್ ಅವರ ವೈದ್ಯಕೀಯ ಇತಿಹಾಸವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

