HomeIndiaನಿನ್ನಂಥ ಸುಂದರಿಗೆ ಈತ ಸರಿಯಾದ ಜೋಡಿಯಲ್ಲ ಎಂದ ನೆಟ್ಟಿಗರು ; ಹೊಗಳಿಕೆಗೆ ಮನಸೋತು ಪತಿಯಿಂದ ದೂರಾಗಲು...

ನಿನ್ನಂಥ ಸುಂದರಿಗೆ ಈತ ಸರಿಯಾದ ಜೋಡಿಯಲ್ಲ ಎಂದ ನೆಟ್ಟಿಗರು ; ಹೊಗಳಿಕೆಗೆ ಮನಸೋತು ಪತಿಯಿಂದ ದೂರಾಗಲು ಮುಂದಾದ ರೀಲ್ಸ್‌ ರಾಣಿ !

ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಹೊಗಳಿಕೆ ಹಾಗೂ ಹುಸಿ ಮೆಚ್ಚುಗೆಗಳು ಜನರ ನಿಜ ಜೀವನದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತವೆ ಎಂಬುದಕ್ಕೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಘಟನೆಯೊಂದು ನಿದರ್ಶನವಾಗಿ ನಿಂತಿದೆ. ನೆಟ್ಟಿಗರ ಮೆಚ್ಚುಗೆಯ ಮಾತುಗಳಿಗೆ ಮರುಳಾದ ಮಹಿಳೆಯೊಬ್ಬಳು, ತನ್ನ ಪತಿ ತನಗೆ ತಕ್ಕವನಲ್ಲ ಹಾಗೂ ಆತ ಕುರೂಪಿ ಎಂದು ಆರೋಪಿಸಿ ಬರೋಬ್ಬರಿ 12 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸಲು ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.

ಭೋಪಾಲ್ ಮೂಲದ ಈ ಮಹಿಳೆಗೆ ಇಂದೋರ್‌ನ ಉದ್ಯಮಿ ಕುಟುಂಬದ ಯುವಕನೊಂದಿಗೆ 2014 ರಲ್ಲಿ ವಿವಾಹವಾಗಿತ್ತು. ಮದುವೆಯ ನಂತರ ಆಕೆ ಇಂದೋರ್‌ನಲ್ಲಿದ್ದ ಪತಿಯ ಮನೆಗೆ ತೆರಳಿದ್ದು, ದಾಂಪತ್ಯ ಜೀವನ ಸುಸೂತ್ರವಾಗಿ ಸಾಗಿತ್ತು. ಈ ದಂಪತಿಗೆ ಸದ್ಯ 11 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾನೆ.

ಕೆಲವು ವರ್ಷಗಳ ಹಿಂದೆ ಮಹಿಳೆಗೆ ಕಿರು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಗೀಳು ಶುರುವಾಗಿದೆ. ಕ್ರಮೇಣ ಆಕೆಯ ಖಾತೆಗೆ ಸಾವಿರಾರು ಹಿಂಬಾಲಕರು ಸೇರಿಕೊಂಡಿದ್ದು, ಆಕೆಯ ಸೌಂದರ್ಯ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಕೊಂಡಾಡಿ ಕಾಮೆಂಟ್‌ಗಳ ಸುರಿಮಳೆಗರೆಯಲಾರಂಭಿಸಿದ್ದಾರೆ. ನಿನ್ನ ಸೌಂದರ್ಯಕ್ಕೆ ನೀನು ದೊಡ್ಡ ಮಟ್ಟದಲ್ಲಿ ಮಿಂಚಬೇಕಿತ್ತು, ಇಂತಹ ಸುಂದರ ಮುಖಕ್ಕೆ ನಿನ್ನ ಗಂಡ ಕೊಂಚವೂ ಸರಿಸಾಟಿಯಲ್ಲ ಎಂಬಂತಹ ಮಾತುಗಳನ್ನು ನೆಟ್ಟಿಗರು ಪದೇಪದೇ ಹೇಳತೊಡಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ಮಹಿಳೆಗೆ, ಇಷ್ಟು ವರ್ಷಗಳ ಸಂಸಾರದ ನಂತರ ಇದ್ದಕ್ಕಿದ್ದಂತೆ ತನ್ನ ಪತಿ ಅಂದಹೀನನಾಗಿ ಕಾಣತೊಡಗಿದ್ದಾನೆ. ಮನೆಯಲ್ಲಿ ದಿನನಿತ್ಯ ಜಗಳ ಆರಂಭಿಸಿದ ಆಕೆ, ತನಗೆ ಪ್ರತ್ಯೇಕವಾಗಿ ಹೊಸ ಮನೆಯನ್ನು ಖರೀದಿಸಿಕೊಡಬೇಕು ಎಂದು ಅಸಾಧ್ಯವಾದ ಬೇಡಿಕೆ ಇಟ್ಟಿದ್ದಾಳೆ. ಅದಕ್ಕೆ ಪತಿ ನಿರಾಕರಿಸಿದಾಗ, ಇಬ್ಬರು ಮಕ್ಕಳೊಂದಿಗೆ ಭೋಪಾಲ್‌ನಲ್ಲಿರುವ ತವರು ಮನೆಗೆ ತೆರಳಿದ್ದಾಳೆ.

ಅಷ್ಟಕ್ಕೇ ಸುಮ್ಮನಾಗದ ಆಕೆ, ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾಳೆ. ಜೊತೆಗೆ ಜೀವನಾಂಶ ನೀಡಬೇಕು ಎಂದು ಒತ್ತಾಯಿಸಿ, ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದ ದೂರು ದಾಖಲಿಸಿದ್ದಾಳೆ.

ಪ್ರಕರಣದ ವಿಚಾರಣೆ ವೇಳೆ ದಂಪತಿಗೆ ಆಪ್ತಸಮಾಲೋಚನೆ ನಡೆಸಿದ ಕೌನ್ಸಿಲರ್ ಶೈಲ್ ಅವಸ್ಥಿ ಅವರು ಈ ವಿಚಿತ್ರ ವಿದ್ಯಮಾನದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಮದುವೆಯಾದ ಸಮಯದಲ್ಲಿ ಪತ್ನಿ ಕೇವಲ ಶಾಲಾ ಶಿಕ್ಷಣ ಪಡೆಯುತ್ತಿದ್ದಳು. ತಾನೇ ಮುಂದಾಗಿ ಆಕೆಗೆ ಮುಂದಿನ ವಿದ್ಯಾಭ್ಯಾಸ ಕೊಡಿಸಿದ್ದಲ್ಲದೆ, ಆಕೆ ಸ್ವಾವಲಂಬಿಯಾಗಿ ಬದುಕಲಿ ಎಂಬ ಉದ್ದೇಶದಿಂದ ಬ್ಯೂಟಿ ಪಾರ್ಲರ್ ತೆರೆಯಲು ಸುಮಾರು 4 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೆ ಎಂದು ಪತಿ ನೋವು ತೋಡಿಕೊಂಡಿದ್ದಾನೆ. ಮದುವೆಯಾದಾಗ ತಾನು ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ ಎಂದು ಆತ ವಿವರಿಸಿದ್ದಾನೆ.

ಆದರೆ, ಕೌನ್ಸಿಲರ್‌ಗಳ ಎದುರು ಪಟ್ಟು ಬಿಡದ ಮಹಿಳೆ, ಯಾವುದೇ ಕಾರಣಕ್ಕೂ ಸಂಧಾನಕ್ಕೆ ಒಪ್ಪುತ್ತಿಲ್ಲ. ತನಗೆ ವಿಚ್ಛೇದನ ಬೇಕೇ ಬೇಕು ಎಂದು ಹಠ ಹಿಡಿದಿದ್ದು, ಇಬ್ಬರು ಮಕ್ಕಳ ಪೈಕಿ ಒಬ್ಬೊಬ್ಬರು ತಲಾ ಒಂದು ಮಗುವಿನ ಜವಾಬ್ದಾರಿ ವಹಿಸಿಕೊಳ್ಳೋಣ ಎಂಬ ಪ್ರಸ್ತಾಪ ಮುಂದಿಟ್ಟಿದ್ದಾಳೆ. ಜಾಲತಾಣದ ಕೃತಕ ಹೊಗಳಿಕೆಗೆ ಮರುಳಾಗಿ ಹಸನಾಗಿದ್ದ ಸಂಸಾರವನ್ನೇ ಬೀದಿಗೆ ತಂದ ಈ ಪ್ರಕರಣ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular