ಬೆಂಗಳೂರು: ತಾಲೂಕು ಆಸ್ಪತ್ರೆ PHC, CHC ದತ್ತು ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸರ್ಕಾರಿ, ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಆರೋಗ್ಯ ಕೇಂದ್ರಗಳ ದತ್ತು ನೀಡಲಾಗುವುದು.
ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಜ್ಞ ವೈದ್ಯರ ಸೇವೆ ಕಲ್ಪಿಸಲಾಗುವುದು. ಸ್ತ್ರೀರೋಗ, ಅರವಳಿಕೆ, ಮಕ್ಕಳು, ಕೀಲು ಮೂಳೆ ತಜ್ಞರು ಸೇರಿ ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು. ತಜ್ಞ ವೈದ್ಯರ ಕೊರತೆ ನೀಗಿಸಲು ವೈದ್ಯಕೀಯ ಕಾಲೇಜುಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು.
ಪ್ರತಿ ವೈದ್ಯಕೀಯ ಕಾಲೇಜಿನಿಂದ ಒಂದು ತಾಲೂಕು ಆಸ್ಪತ್ರೆ, CHC ಮತ್ತು PHC ದತ್ತು ಪಡೆದುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಾಗಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಜಿಲ್ಲಾಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ರೋಗಿಗಳ ಒತ್ತಡ ಕಡಿಮೆ ಮಾಡಲು ಯೋಜನೆ ರೂಪಿಸಲಾಗಿದೆ.
ತುರ್ತು ಚಿಕಿತ್ಸೆ, ಪ್ರಸೂತಿ, ಮಕ್ಕಳ ಚಿಕಿತ್ಸೆ ಸೇವೆ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಚಿಕಿತ್ಸೆ ಪಡೆಯಲು ರೋಗಿಗಳಿಗೆ ನೋಂದಣಿ ವ್ಯವಸ್ಥೆ ಮಾಡಲಾಗುವುದು. 108 ಮತ್ತು ಇತರೆ ಆಂಬುಲೆನ್ಸ್ ಮೂಲಕ ರೋಗಿಗಳ ರೆಫರೆಲ್ ವ್ಯವಸ್ಥೆ ಕಲ್ಪಿಸಲಾಗುವುದು. ಟೆಲಿ ಮೆಡಿಸಿನ್ ಮತ್ತು ಡಿಜಿಟಲ್ ಸಮಾಲೋಚನೆ ಕಲ್ಪಿಸಲಾಗುವುದು. ವೈದ್ಯ ವಿದ್ಯಾರ್ಥಿಗಳು, ಇಂಟರ್ನ್ ಗಳು ಮತ್ತು ಪಿಜಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ದತ್ತು ಪಡೆದ ಪ್ರತಿ ಆಸ್ಪತ್ರೆಯಲ್ಲಿ ಸೇವಾ ದಿನಗಳ ಮಾಸಿಕ ವೇಳಾಪಟ್ಟಿ ಪ್ರಕಟಿಸಲಾಗುವುದು. ಆರೋಗ್ಯ ಕೇಂದ್ರಗಳ ಸೇವೆ ಹಾಜರಾತಿ ಚಿಕಿತ್ಸೆಯ ಮಾಸಿಕ ಮೇಲ್ವಿಚಾರಣೆ ಗ್ರಾಮೀಣ ಆರೋಗ್ಯದ ಕುರಿತು ಸಂಶೋಧನೆ ಮತ್ತು ದಾಖಲೀಕರಣಕ್ಕೂ ಒತ್ತು ನೀಡಲಾಗುವುದು. ತಜ್ಞ ವೈದ್ಯರ ಕೊರತೆ ಹಿನ್ನೆಲೆ ಆಸ್ಪತ್ರೆಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಸರಿಪಡಿಸಲು ದತ್ತು ಯೋಜನೆ ರೂಪಿಸಲಾಗಿದೆ.
ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ: ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಸೌಲಭ್ಯ ಪರಿಶೀಲಿಸಿ ಸೂಕ್ತ ನಿರ್ದೇಶನ
ಶಿವಮೊಗ್ಗ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಶನಿವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಮೆಡಿಸಿನ್ ಜನರಲ್ ವಾರ್ಡ್ ಗೆ ಭೇಟಿ ನೀಡಿ, ಮಹಿಳಾ ಒಳರೋಗಿಗಳೊಂದಿಗೆ ಮಾತನಾಡಿ, ಅಲ್ಲಿನ ನೈರ್ಮಲ್ಯ ಹಾಗೂ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು.
ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ಮತ್ತು ಅವರ ಸಂಬಂಧಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಉಚಿತ ಔಷಧ ಸರಬರಾಜು, ವೈದ್ಯರ ಲಭ್ಯತೆ ಹಾಗೂ ಸಿಬ್ಬಂದಿಯ ನಡೆ-ನುಡಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಹೊರಗಿನಿಂದ ಔಷಧಿಗಳನ್ನು ತರಲು ಬರೆದುಕೊಡುತ್ತಾರಾ? ಉಚಿತವಾಗಿ ಕೊಡ್ತಾರಾ? ಕುಡಿಯುವ ನೀರು ಲಭ್ಯವಿದೆಯಾ, ಶೌಚಾಲಯದಲ್ಲಿ ನೀರು ಹಾಗೂ ಸ್ವಚ್ಚತೆ ಇದೆಯಾ ಎಂದು ಒಳರೋಗಿಗಳೊಂದಿಗೆ ವಿಚಾರಿಸಿದರು.
ಸಿಬ್ಬಂದಿಗಳು, ಸ್ವಚ್ಚತಾ ಸಿಬ್ಬಂದಿಗಳ ವೇತನ, ಸೌಲಭ್ಯಗಳ ಬಗ್ಗೆ, ಎಬಿಎಆರ್ ಕೆ ಸೌಲಭ್ಯದ ಬಗ್ಗೆ ಪರಿಶೀಲಿಸಿದರು.
ದುಡಿಯುವ ಮಗ ತೀರಿಕೊಂಡಿದ್ದು, ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾಗಿದ್ದು ಇದರಿಂದ ತಾಯಿಯವರ ಡಯಾಲಿಸಿಸ್ ಮಾಡಿಸುವುದು ಕಷ್ಟ ಆಗುತ್ತಿರುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದ ಮಹಿಳೆ ಕುರಿತು, ಆಹಾರ ಇಲಾಖೆಯ ಉಪ ನಿರ್ದೇಶಕ ರೊಂದಿಗೆ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಅನುಕೂಲ ಮಾಡುವಂತೆ ತಿಳಿಸಿದರು.
ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ:
ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಗರ್ಭಿಣಿಯರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ತಡೆಯಲು, ನೋಂದಣಿ ಹಾಗೂ ಚಿಕಿತ್ಸಾ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಈ ಹಿಂದೆಯೇ ಸೂಚಿಸಿದ್ದೆ ಎಂದು ಕೌಂಟರ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ರೋಗಿಗಳಿಗೆ ತೊಂದರೆಯಾಗದಂತೆ ಆಸ್ಪತ್ರೆಯ ಆಡಳಿತದಲ್ಲಿ ಉತ್ತರದಾಯಿತ್ವ ತರಲು ಹಾಗೂ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ಒಳರೋಗಿಗಳು, ಮತ್ತು ಅವರ ಕಡೆಯವರು ರೋಗಿಗಳ ಕೈಯಲ್ಲೇ ಲ್ಯಾಬ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗುತ್ತದೆ.ಪರೀಕ್ಷೆಗಳ ವರದಿ ಸಿಗುವುದು ತುಂಬಾ ತಡ ಮತ್ತು ಸಾಕಷ್ಟು ಓಡಾಟ ಆಗಿ ಕಷ್ಟವಾಗುತ್ತಿದೆ ಎಂದು ದೂರಿದಾಗ, ವರದಿಗಳನ್ನು ಡಿಜಿಟಲೈಜ್ ಮಾಡಿಸುವ ಬಗ್ಗೆ, ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಶೀಘ್ರವಾಗಿ ನೀಡುವ ಬಗ್ಗೆ ಸೂಚನೆಗಳನ್ನು ನೀಡಿ, ರೋಗಿಗಳಿಗೆ ನೀಡುವ ಮೊಟ್ಟೆ, ಬಾಳೆಹಣ್ಣು, ಆಹಾರ ಹಾಗೂ ಶೌಚಾಲಯ ಕುರಿತು ವಿಚಾರಿಸಿ ಮಾಹಿತಿ ಪಡೆದುಕೊಂಡರು.
ಸ್ವಚ್ಛತೆಯ ಕೊರತೆ: ಆಸ್ಪತ್ರೆಯ ವಾರ್ಡ್‌ಗಳಲ್ಲಿ ಮತ್ತು ಶೌಚಾಲಯಗಳಲ್ಲಿ ಸೂಕ್ತ ಸ್ವಚ್ಛತೆ ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಹಾಗೂ ವಾರ್ಡ್‌ಗಳ ಹಿಂಭಾಗದ ಕಿಟಕಿಗಳು ಮುರಿದುಬಿದ್ದಿದ್ದು, ಮುಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಬೆಡ್ ಹಾಗೂ ವಾರ್ಡ್‌ಗಳ ಸುತ್ತಲೂ ವಿಪರೀತ ಧೂಳು ತುಂಬಿದ್ದು, ತಕ್ಷಣವೇ ಇವುಗಳನ್ನು ಸರಿಪಡಿಸಲು ಸೂಚಿಸಿದ್ದೇನೆ ಎಂದರು.
ಔಷಧಗಳ ವಿತರಣೆ: ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬರೆದುಕೊಡಬಾರದು, ಆಸ್ಪತ್ರೆಯ ಈ-ಫಾರ್ಮಸಿಯಲ್ಲೇ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ: ಎಲ್ಲ ವಾರ್ಡ್‌ಗಳಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ತಾಯಿ ಮತ್ತು ಮಕ್ಕಳಿಗಾಗಿ ನಿರ್ಮಿಸಲಾಗಿರುವ ನೂತನ ಎಂಸಿಹೆಚ್ ಆಸ್ಪತ್ರೆಯನ್ನು ಶೀಘ್ರದಲ್ಲೇ ಆರಂಭಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಶೌಚಾಲಯ ಮತ್ತು ಕುಡಿಯುವ ನೀರಿನ ನೈರ್ಮಲ್ಯವನ್ನು ಪ್ರಥಮ ಆದ್ಯತೆಯಾಗಿ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭೇಟಿ ವೇಳೆ ಸಿಮ್ಸ್ ನಿರ್ದೇಶಕ ಡಾ.ರಮೇಶ್ ಬಾಬು, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಡಿಹೆಚ್ ಓ ಡಾ.ನಟರಾಜ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶುಶ್ರೂಣಕಾಧೀಕ್ಷಕರು ಹಾಜರಿದ್ದರು.

