ದೈನಂದಿನ ಜೀವನದಲ್ಲಿ ಕೆಲವರಿಗೆ ಕಿವಿಯಲ್ಲಿ ನಿರಂತರವಾಗಿ ರಿಂಗಣಿಸುವ ಶಬ್ದ ಅಥವಾ ಏನೋ ವಿಚಿತ್ರವಾಗಿ ಗುಂಯ್ ಎನ್ನುವ ಸದ್ದು ಕೇಳುತ್ತಿರುತ್ತದೆ. ವೈದ್ಯಕೀಯ ಲೋಕದಲ್ಲಿ ಟಿನ್ನಿಟಸ್ ಎಂದು ಕರೆಯಲ್ಪಡುವ ಈ ಸಮಸ್ಯೆಯಿಂದ ಅನೇಕರು ಕಿರಿಕಿರಿ ಅನುಭವಿಸುತ್ತಾರೆ. ಕಿವಿಯಲ್ಲಿ ಈ ರೀತಿಯ ಶಬ್ದ ಕೇಳಿಸಿಕೊಳ್ಳಲು ಶೀತ, ಅಲರ್ಜಿ, ಸೈನಸ್ ಅಥವಾ ಕಿವಿಯಲ್ಲಿ ಮೇಣ ಸಂಗ್ರಹವಾಗುವುದು ಪ್ರಮುಖ ಕಾರಣಗಳಾಗಿರಬಹುದು. ಆಯುರ್ವೇದ ತಜ್ಞರಾದ ಆಚಾರ್ಯ ಬಾಲಕೃಷ್ಣ ಅವರು ಇಂತಹ ಸಮಸ್ಯೆಗಳಿಗೆ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ಸೂಚಿಸಿದ್ದಾರೆ.
ಪ್ರಾಣಾಯಾಮದ ಮೂಲಕ ಪರಿಹಾರ
ಕಿವಿಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯೋಗ ಮತ್ತು ಪ್ರಾಣಾಯಾಮಕ್ಕೆ ವಿಶೇಷ ಸ್ಥಾನವಿದೆ. ಪ್ರತಿದಿನ ನಿಯಮಿತವಾಗಿ ಭಸ್ತಿಕಾ ಪ್ರಾಣಾಯಾಮವನ್ನು 5 ನಿಮಿಷ ಹಾಗೂ ಕಪಾಲಭಾತಿ ಪ್ರಾಣಾಯಾಮವನ್ನು 15 ರಿಂದ 20 ನಿಮಿಷಗಳ ಕಾಲ ಅಭ್ಯಾಸ ಮಾಡುವುದರಿಂದ ಕಿವಿಯ ಸದ್ದಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ. ಇದು ಕಿವಿಯ ಒಳಗಿನ ನರಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ಸಾಸಿವೆ ಎಣ್ಣೆಯ ಬಳಕೆ
ಕಿವಿಯ ರಿಂಗಣಿಸುವಿಕೆಯನ್ನು ಕಡಿಮೆ ಮಾಡಲು ಸಾಸಿವೆ ಎಣ್ಣೆ ಉತ್ತಮ ಮದ್ದಾಗಿ ಕೆಲಸ ಮಾಡುತ್ತದೆ. 50 ಮಿಲಿ ಸಾಸಿವೆ ಎಣ್ಣೆಗೆ 10 ಗ್ರಾಂ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಚೆನ್ನಾಗಿ ಕಾಯಿಸಬೇಕು. ಬೆಳ್ಳುಳ್ಳಿ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಎಣ್ಣೆಯನ್ನು ಸೋಸಿಕೊಳ್ಳಿ. ಈ ಎಣ್ಣೆ ಉಗುರು ಬೆಚ್ಚಗಿರುವಾಗ ಪ್ರತಿ ಕಿವಿಗೆ ನಾಲ್ಕು ಹನಿಗಳನ್ನು ಹಾಕುವುದರಿಂದ ಕಿವಿಯಲ್ಲಿನ ಶಬ್ದ ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯ ಬದಲಿಗೆ ಎಳ್ಳೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಕೂಡ ಬಳಸಬಹುದು. ಸ್ನಾನದ ನಂತರ ತಲೆ ಮತ್ತು ಕಿವಿಗೆ ಎಣ್ಣೆ ಹಚ್ಚುವುದರಿಂದ ಕಿವಿಯ ಆರೋಗ್ಯ ಸುಧಾರಿಸುತ್ತದೆ.
ಕಿವಿ ಶಬ್ದಕ್ಕೆ ಮುಖ್ಯ ಕಾರಣಗಳೇನು?
ಕಿವಿಯಲ್ಲಿ ಶಬ್ದ ಉಂಟಾಗಲು ಕೇವಲ ಸೋಂಕು ಮಾತ್ರವಲ್ಲದೆ ಇತರ ದೈಹಿಕ ಸಮಸ್ಯೆಗಳು ಕೂಡ ಕಾರಣವಾಗಿರುತ್ತವೆ. ಕಿವಿಯ ತಮಟೆ ಹಾನಿಗೊಳಗಾಗಿದ್ದರೆ ಕಿವಿಯಲ್ಲಿ ಏನೋ ಕಟಪಟ ಎನ್ನುವ ಸದ್ದು ಕೇಳಿಸುತ್ತದೆ. ಅದೇ ರೀತಿ ಹಲ್ಲು ಕಡಿಯುವ ಅಭ್ಯಾಸ ಅಥವಾ ದವಡೆಯ ಕೀಲುಗಳಲ್ಲಿ ಸಮಸ್ಯೆ ಇದ್ದರೂ ಕೂಡ ಕಿವಿ ಹೊಡೆತದ ಅನುಭವವಾಗುತ್ತದೆ. ಇನ್ನು ಕೆಲವೊಮ್ಮೆ ಕಿವಿಯ ಮೇಣವು ತಮಟೆಯ ಹತ್ತಿರ ಸಂಗ್ರಹವಾದಾಗ ದವಡೆಯನ್ನು ಆಡಿಸಿದಾಗಲೆಲ್ಲ ಕಿವಿ ಒಳಗೆ ಸದ್ದು ಕೇಳಿಬರುತ್ತದೆ. ಇಂತಹ ಲಕ್ಷಣಗಳಿದ್ದಾಗ ಕೂಡಲೇ ಜಾಗ್ರತೆ ವಹಿಸುವುದು ಉತ್ತಮ.

