ಕರ್ನಾಟಕ ರಾಜ್ಯ ರಾಜಕೀಯದ ಬಿಗ್ ಬ್ರೇಕಿಂಗ್ ನ್ಯೂಸ್. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಪುನಃ ರಾಷ್ಟ್ರ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. 72 ವರ್ಷದ ಡಿ.ವಿ.ಸದಾನಂದ ಗೌಡರಿಗೆ 2024ರ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿತ್ತು.
ಜೂನ್‌ನಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ 4 ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಕರ್ನಾಟಕ ವಿಧಾನಸಭೆಯಲ್ಲಿ 137 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ 3 ಸೀಟುಗಳಲ್ಲಿ ಜಯಗಳಿಸಬಹುದು.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ರಾಜ್ಯಸಭೆ ಅವಧಿಯೂ ಮುಕ್ತಾಯವಾಗಲಿದೆ. ಆದರೆ ಜೆಡಿಎಸ್ ಬಳಿ ಪುನಃ ಅವರನ್ನು ಆಯ್ಕೆ ಮಾಡುವಷ್ಟು ಶಾಸಕರ ಬಲವಿಲ್ಲ. ಆದ್ದರಿಂದ ಬಿಜೆಪಿಗೆ ಒಂದು ಸೀಟು ಸುಲಭವಾಗಿ ಸಿಗಲಿದೆ. ಈ ಸೀಟಿನ ಮೂಲಕ ಡಿ.ವಿ.ಸದಾನಂದ ಗೌಡರು ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ ಎಂಬುದು ಸುದ್ದಿ.
ಕೈತಪ್ಪಿದ್ದ ಟಿಕೆಟ್: ಡಿ.ವಿ.ಸದಾನಂದ ಗೌಡರು 2014ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ 718,326 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. 2019ರ ಚುನಾವಣೆಯಲ್ಲಿ 824,500 ಮತಗಳನ್ನು ಪಡೆದು ಮತ್ತೊಮ್ಮೆ ಆಯ್ಕೆಯಾದರು. ಆದರೆ 2023ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾದರು. ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ಕೈತಪ್ಪಿತ್ತು.
ಅಚ್ಚರಿ ಎಂಬಂತೆ ಡಿ.ವಿ. ಸದಾನಂದ ಗೌಡರು 2014ರಲ್ಲಿ ನರೇಂದ್ರ ಮೋದಿ ಅವರ ಮೊದಲ ಸಂಪುಟದಲ್ಲಿಯೇ ಕೇಂದ್ರ ರೈಲ್ವೆ ಸಚಿವರಾದರು. ಮೇ 27, 2014 ರಂದು ಅಧಿಕಾರ ಸ್ವೀಕರಿಸಿದ ಅವರು 2014-15ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದರು.
ನಂತರ ಅವರನ್ನು ಕಾನೂನು ಸಚಿವರಾಗಿ ಬದಲಾಯಿಸಲಾಯಿತು. ಬಳಿಕ ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಖಾತೆಯ ಹೊಣೆ ನೀಡಲಾಯಿತು. 2023ರಲ್ಲಿ ಟಿಕೆಟ್ ನೀಡಲಿಲ್ಲ.
2023ರಲ್ಲಿ ಟಿಕೆಟ್ ಕೈತಪ್ಪಿದ ಬಳಿಕ ಸದಾನಂದ ಗೌಡ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಯಿತು. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
ಈಗ ಜೂನ್‌ನಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಡಿ.ವಿ.ಸದಾನಂದ ಗೌಡ ಅಭ್ಯರ್ಥಿಯಾಗಲಿದ್ದಾರೆ? ಎಂಬ ಸುದ್ದಿ ಹಬ್ಬಿದೆ. ಆದರೆ ಈ ಕುರಿತು ಬಿಜೆಪಿ ನಾಯಕರು ಖಚಿತಪಡಿಸಿಲ್ಲ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಒಂದು ಸೀಟು ಗೆಲ್ಲಬಹುದು. ಬಿಜೆಪಿ ಒಪ್ಪದಿದ್ದರೆ ಹೆಚ್.ಡಿ.ದೇವೇಗೌಡರ ಚುನಾವಣಾ ರಾಜಕೀಯ ಅಂತ್ಯವಾಗಲಿದೆ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಬಿಜೆಪಿ ಬದಲು ಮೈತ್ರಿಕೂಟದ ಅಭ್ಯರ್ಥಿಯಾಗಿ ದೇವೇಗೌಡರು ಪುನಃ ರಾಜ್ಯಸಭೆಗೆ ಪ್ರವೇಶ ಮಾಡಲಿದ್ದಾರೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಸದ್ಯ 2 ಸೀಟು ಖಾಲಿಯಾಗಿದೆ. 222ರಲ್ಲಿ ಸ್ಪೀಕರ್ ಹೊರತುಪಡಿಸಿ 134 ಕಾಂಗ್ರೆಸ್ ಶಾಸಕರಿದ್ದಾರೆ. ಪಕ್ಷೇತರರ ಬೆಂಬಲದ ಕಾರಣ ಕಾಂಗ್ರೆಸ್ ಸದಸ್ಯ ಬಲ 137.
ಬಿಜೆಪಿ 65 ಸೀಟು ಗೆದ್ದಿದೆ. ಆದರೆ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಅಮಾನತುಗೊಂಡಿದ್ದು, ಪಕ್ಷದ ಬಲ 62. ಜನಾರ್ದನ ರೆಡ್ಡಿ ಬೆಂಬಲ ಸೇರಿ 63 ಸದಸ್ಯರು.
ರಾಜ್ಯಸಭೆ ಒಂದು ಸೀಟು ಗೆಲ್ಲಲು 45 ಮತಗಳು ಬೇಕು. ಕಾಂಗ್ರೆಸ್ ಸುಲಭವಾಗಿ 3 ಸೀಟು ಗೆಲ್ಲಲಿದೆ. ಬಿಜೆಪಿ-ಜೆಡಿಎಸ್ ಒಂದು ಸೀಟು ಗೆಲ್ಲಬಹುದು. ಆದ್ದರಿಂದ ಆ ಒಂದು ಸೀಟು ಬಿಜೆಪಿಗೋ ಅಥವ ಹೆಚ್.ಡಿ.ದೇವೇಗೌಡ ಮರು ಆಯ್ಕೆಯೋ? ಎಂಬುದು ಪ್ರಶ್ನೆ.

