ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಬೇಕೆಂದರೆ ಆಧಾರ್ ಜಿರಾಕ್ಸ್ ಕೊಡಿ, ಆಸ್ಪತ್ರೆಯಲ್ಲಿ ದಾಖಲಾಗಬೇಕೆಂದರೆ ಆಧಾರ್ ಪ್ರತಿ ನೀಡಿ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕೆಂದರೂ ಆಧಾರ್ ಫೋಟೋಕಾಪಿ ಬೇಕು! ಹೀಗೆ ಎಲ್ಲೆಡೆ ಆಧಾರ್ ಜಿರಾಕ್ಸ್ ಹಿಡಿದುಕೊಂಡು ಓಡಾಡುವುದು ಹಲವರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಇನ್ಮುಂದೆ ಈ ಕಿರಿಕಿರಿಗೆ ಮುಕ್ತಿ ಸಿಗುವ ಸಾಧ್ಯತೆಯಿದೆ. ನಿಮ್ಮ ಜೇಬಿನಲ್ಲಿರುವ ಮೊಬೈಲ್ ಫೋನ್‌ನಲ್ಲೇ ಆಧಾರ್ ಗುರುತಿನ ಪರಿಶೀಲನೆ ಮಾಡಿಸಿಕೊಳ್ಳುವ ಹೊಸ ವ್ಯವಸ್ಥೆಯನ್ನು UIDAI ಪರಿಚಯಿಸಲು ಸಿದ್ಧತೆ ನಡೆಸಿದೆ.
ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡುವಾಗ, ಆಸ್ಪತ್ರೆಯಲ್ಲಿ ದಾಖಲಾಗುವಾಗ ಅಥವಾ ಯಾವುದಾದರೂ ಕೆಲಸಕ್ಕೆ ಆಧಾರ್ ಕಾರ್ಡ್ ಕೇಳಿದಾಗಲೆಲ್ಲ ಜೆರಾಕ್ಸ್ ಪ್ರತಿ ನೀಡಬೇಕೆ? ಇನ್ಮುಂದೆ ಈ ಕಿರಿಕಿರಿ ತಪ್ಪಲಿದೆ. ಆಧಾರ್ ಕಾರ್ಡ್‌ದಾರರಿಗೆ ಅನುಕೂಲವಾಗುವಂತೆ UIDAI ಹೊಸ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, 2027ರ ಜನವರಿಯಿಂದ ಮೊಬೈಲ್ ಆ್ಯಪ್ ಮೂಲಕವೇ ಆಧಾರ್ ಪರಿಶೀಲನೆ ಮಾಡಿಸಿಕೊಳ್ಳುವ ಸೌಲಭ್ಯ ಲಭ್ಯವಾಗುವ ನಿರೀಕ್ಷೆಯಿದೆ.
ಜಿರಾಕ್ಸ್ ಕೊಡುವ ಅಗತ್ಯವಿಲ್ಲ, ಮೊಬೈಲ್ ಸಾಕು!
ಇಲ್ಲಿಯವರೆಗೆ ಹೋಟೆಲ್‌ಗಳು, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಗುರುತಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್‌ನ ಜಿರಾಕ್ಸ್ ಪ್ರತಿ ನೀಡಬೇಕಾಗುತ್ತಿತ್ತು. ಆದರೆ ಈ ಫೋಟೋಕಾಪಿಗಳು ಬೇರೆಯವರ ಕೈ ಸೇರಿದರೆ ವೈಯಕ್ತಿಕ ಮಾಹಿತಿಯ ದುರುಪಯೋಗವಾಗುವ ಆತಂಕವೂ ಇರುತ್ತದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಫ್‌ಲೈನ್ ಆಧಾರ್ ಪರಿಶೀಲನಾ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಹೊಸ ವ್ಯವಸ್ಥೆಯಲ್ಲಿ ಮೊಬೈಲ್ ಆ್ಯಪ್ ಮೂಲಕವೇ ಗುರುತಿನ ಪರಿಶೀಲನೆ ಪೂರ್ಣಗೊಳಿಸಬಹುದು. ಅಂದರೆ, ಪ್ರತಿ ಬಾರಿ ಆಧಾರ್ ಜಿರಾಕ್ಸ್ ತೆಗೆಸಿಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ.
ಈಗಾಗಲೇ 300 ಸಂಸ್ಥೆಗಳು ನೋಂದಣಿ!
ಈ ಹೊಸ ವ್ಯವಸ್ಥೆಗಾಗಿ ಈಗಾಗಲೇ ಸುಮಾರು 300 ಸಂಸ್ಥೆಗಳು ನೋಂದಾಯಿಸಿಕೊಂಡಿವೆ ಎನ್ನಲಾಗಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಹಾಗೂ ಸ್ವಿಗ್ಗಿ, ಜೊಮ್ಯಾಟೊದಂತಹ ಕಂಪನಿಗಳು ಈ ಪಟ್ಟಿಯಲ್ಲಿವೆ.
ಗ್ರಾಹಕರು ತಮ್ಮ ಒಪ್ಪಿಗೆ ನೀಡಿದ ಬಳಿಕ ಆ್ಯಪ್ ಮೂಲಕವೇ ಅಗತ್ಯ ಗುರುತಿನ ವಿವರಗಳನ್ನು ಹಂಚಿಕೊಳ್ಳಬಹುದು. ಇದರಿಂದ ಪರಿಶೀಲನೆ ಸುಲಭವಾಗುವುದರ ಜತೆಗೆ ಸಮಯವೂ ಉಳಿತಾಯವಾಗಲಿದೆ.
2027ರ ಜನವರಿಯಿಂದ ಸೌಲಭ್ಯ ನಿರೀಕ್ಷೆ
UIDAI 2027ರ ಜನವರಿಯಿಂದ ಈ ಹೊಸ ಡಿಜಿಟಲ್ ಸೌಲಭ್ಯವನ್ನು ಬಳಕೆಗೆ ತರಲು ಸಿದ್ಧತೆ ನಡೆಸುತ್ತಿದೆ. ಹಂತ ಹಂತವಾಗಿ ಹೆಚ್ಚಿನ ಸಂಸ್ಥೆಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದೆ.
ಆದರೆ ಎಲ್ಲ ಸೇವೆಗಳಲ್ಲೂ ಆಧಾರ್ ಜಿರಾಕ್ಸ್ ಅಗತ್ಯ ಸಂಪೂರ್ಣವಾಗಿ ರದ್ದಾಗಲಿದೆ ಎಂದರ್ಥವಲ್ಲ. ಬ್ಯಾಂಕ್‌ಗಳು, ಗ್ಯಾಸ್, ನೀರು ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಕೆಲವು ಸೇವೆಗಳಲ್ಲಿ ಪ್ರಸ್ತುತ ಇರುವ ದಾಖಲೆ ಸಲ್ಲಿಕೆ ನಿಯಮಗಳು ಮುಂದುವರಿಯಬಹುದು. ಒಟ್ಟಿನಲ್ಲಿ, ಹೊಸ ವ್ಯವಸ್ಥೆ ಜಾರಿಗೆ ಬಂದರೆ ಆಧಾರ್ ಕಾರ್ಡ್ ಜಿರಾಕ್ಸ್‌ಗಾಗಿ ಅಂಗಡಿಗಳಿಗೆ ಅಲೆಯುವ ಕಿರಿಕಿರಿ ಕಡಿಮೆಯಾಗಲಿದೆ. ಮೊಬೈಲ್ ಫೋನ್‌ನಲ್ಲೇ ಗುರುತಿನ ಪರಿಶೀಲನೆ ಮುಗಿಸುವ ದಿನಗಳು ಹತ್ತಿರವಾಗುತ್ತಿವೆ!

