ತಿರುವನಂತಪುರಂ: ಕೇರಳದ ಕಾಲಡಿ ಸಮೀಪದಲ್ಲಿರುವ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅಮಾನತು ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮಾನತುಗೊಂಡಿರುವ 16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರು ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಶನಿವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ನಟ ಪ್ರಕಾಶ್ ರಾಜ್, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಕೇರಳದ ಯುಡಿಎಫ್ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಪ್ರತಿಭಟನೆ, 16 ವಿದ್ಯಾರ್ಥಿಗಳ ಅಮಾನತು!
ಆಗಸ್ಟ್ 13ರಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ಯಾಂಪಸ್‌ನಲ್ಲಿ ಅಗತ್ಯ ಸೌಲಭ್ಯಗಳ ಕೊರತೆಯನ್ನು ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕುಲಪತಿ ಸಿಜಾ ಥಾಮಸ್ ಅವರ ಅಣಕು ಅಂತ್ಯಕ್ರಿಯೆ ನಡೆಸಿದ್ದು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗೆ ಹಾನಿ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು.
ಆದರೆ, ಅಮಾನತಿನ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಯಿತು. ಈ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆದೇಶಿಸಿತ್ತು. ಆದರೆ, ವಿಭಾಗೀಯ ಪೀಠ ಈ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ಪ್ರಕರಣವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಮರುಪರಿಶೀಲಿಸುವಂತೆ ನಿರ್ದೇಶಿಸಿತ್ತು.
ವಿದ್ಯಾರ್ಥಿಗಳ ಪರ ನಿಂತ ಪ್ರಕಾಶ್ ರಾಜ್; ಸರ್ಕಾರಕ್ಕೆ ನೇರ ಪ್ರಶ್ನೆ!
ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಕಾಶ್ ರಾಜ್, ಅವರ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿದರು. ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಯುವಜನರನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದು ಕಿಡಿಕಾರಿದರು.
“ಯುವಕರು ಪ್ರತಿಭಟನೆ ನಡೆಸುವುದನ್ನು, ಪ್ರಶ್ನೆ ಕೇಳುವುದನ್ನು ತಡೆಯಲು ಎಲ್ಲರೂ ಮೋದಿ ಮತ್ತು ಕೇಂದ್ರ ಸರ್ಕಾರದಂತೆ ವರ್ತಿಸಬೇಕೇ? ಇದು ಯಾವ ರೀತಿಯ ಅರಾಜಕತೆ ಮತ್ತು ಸರ್ವಾಧಿಕಾರಿ ಧೋರಣೆ?” ಎಂದು ಪ್ರಶ್ನಿಸಿದರು.
ವಿಶ್ವವಿದ್ಯಾಲಯದಲ್ಲಿನ ಸೌಲಭ್ಯಗಳ ಕೊರತೆಯನ್ನು ಬಿಂಬಿಸಲು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದ್ದರು. ಹಾಗಾದರೆ ಈ ದೇಶದಲ್ಲಿ ನಾಟಕ ಪ್ರದರ್ಶಿಸುವುದೂ ಅಪರಾಧವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಕ್ಷಮಾಪಣೆ ಪತ್ರ ಬರೆದು ಸುಮ್ಮನಿರುವ ತಲೆಮಾರು ಇದಲ್ಲ!’
ತಮ್ಮ ಭಾಷಣದಲ್ಲಿ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ಇಂದಿನ ಯುವಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.
“ಈ ತಲೆಮಾರು ಸಾವರ್ಕರ್ ಅವರದ್ದಲ್ಲ, ಕ್ಷಮಾಪಣೆ ಪತ್ರ ಬರೆಯಲು. ಗಾಂಧೀಜಿ ಕಲಿಸಿದ ಶಕ್ತಿಯಿಂದ ಪ್ರತಿಭಟಿಸುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಹಕ್ಕುಗಳ ಮೂಲಕ ಪ್ರಶ್ನೆ ಕೇಳುತ್ತದೆ. ಇದು ಮನುಸ್ಮೃತಿಯಲ್ಲ, ಸಂವಿಧಾನ” ಎಂದು ಗುಡುಗಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ
ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು. ವಿದ್ಯಾರ್ಥಿಗಳು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಅವರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ವಿದ್ಯಾರ್ಥಿಗಳು ಕುಲಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳಿಗೆ ಸೂಕ್ತ ಸಾಕ್ಷ್ಯಗಳಿವೆಯೇ ಎಂದು ಪ್ರಶ್ನಿಸಿದ ಅವರು, ಆರೋಪಗಳ ಬಗ್ಗೆ ತನಿಖೆ ನಡೆಸುವ ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕೆಲಸ ಬಿಟ್ಟು ಬಂದು ವಿದ್ಯಾರ್ಥಿಗಳೊಂದಿಗೆ ಕೂರುತ್ತೇನೆ!
ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪ್ರಕಾಶ್ ರಾಜ್, ಸಮಸ್ಯೆ ಬಗೆಹರಿಯದಿದ್ದರೆ ತಾವೂ ಅವರೊಂದಿಗೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
“ನಾನು ಪ್ರತಿಭಟನೆಗೆ ಬೆಂಬಲ ಸೂಚಿಸಲು ಇಲ್ಲಿಗೆ ಬಂದಿದ್ದೇನೆ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ನಾನೂ ಬಂದು ವಿದ್ಯಾರ್ಥಿಗಳೊಂದಿಗೆ ಕುಳಿತುಕೊಳ್ಳುತ್ತೇನೆ. ಅದಕ್ಕಾಗಿ ನನ್ನ ಎಲ್ಲ ಕೆಲಸಗಳನ್ನು ನಿಲ್ಲಿಸಿ ಬರುವುದಕ್ಕೂ ನನಗೆ ಯಾವುದೇ ಸಮಸ್ಯೆಯಿಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಕೇರಳ ಸರ್ಕಾರ ಕೇಂದ್ರದ ಬಿಜೆಪಿ ಸರ್ಕಾರದಂತೆಯೇ ಏಕೆ ವರ್ತಿಸುತ್ತಿದೆ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳು ಮತ್ತು ಪೋಷಕರ ವಿಶ್ವಾಸ ಗಳಿಸುವಂತೆ ಸಚಿವರಿಗೆ ಕಿವಿಮಾತು ಹೇಳಿದರು. ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಸಂಘಟನೆಗಳಿಗೂ ಧನ್ಯವಾದ ಅರ್ಪಿಸಿದರು.

