ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಲಯ (ಡಿಆರ್‌ಐ) ವಿಶೇಷ ಅಂತರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದೆ. ಸುಮಾರು 40 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಮತ್ತು 2.9 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. ಇನ್ನೂ ಸಹ ತನಿಖೆ ನಡೆಯುತ್ತಿದೆ.
ಗಡಿಯಾಚೆಗಿನ ಕಳ್ಳಸಾಗಣೆಯ ವಿರುದ್ಧ ನಡೆಸಿದ ಪ್ರಮುಖ ಕಾರ್ಯಾಚರಣೆ ಇದಾಗಿದೆ. ಡಿಆರ್‌ಐ ದೆಹಲಿ ಮತ್ತು ಅಗರ್ತಲಾದಲ್ಲಿ ದಾಳಿ ನಡೆಸಿ, ದುಬೈ ಮತ್ತು ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಅಂತರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲವನ್ನು ಪತ್ತೆ ಹಚ್ಚಿದೆ.
ಈ ಕಾರ್ಯಾಚರಣೆಯಲ್ಲಿ 29 ಕೆಜಿಗೂ ಹೆಚ್ಚು ವಿದೇಶಿ ಮೂಲದ ಚಿನ್ನ ಮತ್ತು ಅಂದಾಜು 2.90 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯ ಆಧಾರದ ಮೇಲೆ, ಜನವರಿ 6ರಂದು ತ್ರಿಪುರಾದ ಅಗರ್ತಲಾದಿಂದ ಬಂದಿದ್ದ ಎರಡು ಪಾರ್ಸೆಲ್‌ಗಳನ್ನು ಸ್ವೀಕರಿಸುತ್ತಿದ್ದ ಪ್ರಮುಖ ವ್ಯಕ್ತಿಯನ್ನು ಲಾಜಿಸ್ಟಿಕ್ಸ್ ಗೋದಾಮಿನಲ್ಲಿ ಬಂಧಿಸಲಾಯಿತು.
ಆ ಪಾರ್ಸೆಲ್‌ಗಳನ್ನು ಪರಿಶೀಲಿಸಿದಾಗ ಅಂತರಾಷ್ಟ್ರೀಯ ರಿಫೈನರಿ ಗುರುತುಗಳಿರುವ ಸುಮಾರು 20.73 ಕೋಟಿ ಮೌಲ್ಯದ 15 ಕೆಜಿ ವಿದೇಶಿ ಮೂಲದ ಚಿನ್ನ ಪತ್ತೆಯಾಗಿದೆ. ಅದೇ ಸಮಯದಲ್ಲಿ ದೆಹಲಿ ಮತ್ತು ಅಗರ್ತಲಾದ ಹಲವು ಸ್ಥಳಗಳಲ್ಲಿ ನಡೆಸಿದ ಶೋಧದಲ್ಲಿ ಹೆಚ್ಚುವರಿಯಾಗಿ 14.2 ಕೆಜಿ ವಿದೇಶಿ ಮೂಲದ ಚಿನ್ನ ಮತ್ತು ಭಾರತೀಯ ಹಾಗೂ ಬಾಂಗ್ಲಾದೇಶಿ ಕರೆನ್ಸಿ ಸೇರಿದಂತೆ 2.90 ಕೋಟಿ ನಗದು ಪತ್ತೆಯಾಗಿದೆ.
ನಾಲ್ವರ ಬಂಧನ: ಒಟ್ಟಾರೆಯಾಗಿ ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಅಡಿ ಸುಮಾರು 40 ಕೋಟಿ ಮೌಲ್ಯದ 29.2 ಕೆಜಿ ಚಿನ್ನ ಮತ್ತು 2.9 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಈ ಜಾಲ ತ್ರಿಪುರಾದ ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿತ್ತು ಮತ್ತು ನಂತರ ದುಬೈ, ಬಾಂಗ್ಲಾದೇಶದ ನಿರ್ವಹಣೆದಾರರು ಹಾಗೂ ಅಗರ್ತಲಾದಲ್ಲಿನ ಜ್ಯುವೆಲ್ಲರಿ ಅಂಗಡಿಗಳ ಮಾಲೀಕರ ಸಹಾಯದೊಂದಿಗೆ ದೇಶೀಯ ಕಾರ್ಗೋ ಸೇವೆಗಳ ಮೂಲಕ ದೆಹಲಿಗೆ ಸಾಗಿಸುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಅಕ್ರಮ ಚಿನ್ನದ ಹರಿವು ತಡೆಯುವ ಮೂಲಕ ಡಿಆರ್‌ಐ ಭಾರತದ ಆರ್ಥಿಕ ಮತ್ತು ಹಣಕಾಸಿನ ಸ್ಥಿರತೆಯನ್ನು ಕಾಪಾಡಲು ವ್ಯಾಪಾರ ಪರಿಸರವನ್ನು ಖಚಿತಪಡಿಸಲು ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

