ಬಳ್ಳಾರಿ ಗಲಭೆ, ಗುಂಡಿನ ದಾಳಿ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬಳಿಕ ಗುರುವಾರ ಬಳ್ಳಾರಿಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅಧಿಕಾರ ಸ್ವೀಕಾರ ಮಾಡಿದರು.
ಬಳ್ಳಾರಿ ಜಿಲ್ಲೆಯ ನೂತನ ಎಸ್‌ಪಿಯಾಗಿ ಕರ್ನಾಟಕ ಸರ್ಕಾರ ಬುಧವಾರ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಿಸಿ ಆದೇಶಿಸಿತ್ತು. ಗುರುವಾರ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಗುಪ್ತವಾರ್ತೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿದ್ದ ಡಾ.ಸುಮನ್ ಡಿ.ಪೆನ್ನೇಕರ್ ಅವರು 2013ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ನಿಯೋಜನೆಗೊಂಡಿದ್ದ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅವರು ಅಧಿಕಾರ ಹಸ್ತಾಂತರಿಸಿದರು.
ನೂತನ ಐಜಿಪಿ ಅಧಿಕಾರ ಸ್ವೀಕಾರ: ಬಳ್ಳಾರಿ ವಲಯದ ನೂತನ ಐಜಿಪಿಯಾಗಿ ಡಾ.ಪಿ.ಎಸ್ ಹರ್ಷ ನೇಮಕಗೊಂಡಿದ್ದು, ಬುಧವಾರ ಅಧಿಕೃತವಾಗಿ ಅವರು ಅಧಿಕಾರ ವಹಿಸಿಕೊಂಡರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, “ಕಾನೂನುಬದ್ಧ, ನಿಷ್ಪಕ್ಷಪಾತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಭದ್ರ-ಬುನಾದಿಯಾಗಿಸಲು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ” ಎಂದರು.
“ಬಳ್ಳಾರಿ ವಲಯದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಪ್ರಮುಖ ಮತ್ತು ಶಾಂತಿಪ್ರಿಯ ಜಿಲ್ಲೆಗಳಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಲು ಹಾಗೂ ಜನಸ್ನೇಹಿ ಆಡಳಿತ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ” ಎಂದು ಹೇಳಿದರು.
ಒಂದೇ ವಾರದಲ್ಲಿ ಅಧಿಕಾರಿಗಳು ಬದಲು: ಒಂದು ವಾರದಲ್ಲಿ ಬಳ್ಳಾರಿ ಎಸ್‌ಪಿಯನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಬಳ್ಳಾರಿಯಲ್ಲಿ ನಡೆದ ಗಲಭೆ ಬಳಿಕ ಐಜಿಪಿಯನ್ನು ವರ್ಗಾಯಿಸಲಾಗಿದೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, “ಬಳ್ಳಾರಿ ವಲಯದ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊರತು ನಾನಲ್ಲ” ಎಂದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಅಧಿಕಾರಿಗಳ ವರ್ಗಾವಣೆಗೆ ಏನು ಕಾರಣ ಕೊಡಲು ಸಾಧ್ಯ. ಇದರಲ್ಲಿ ವಿಶೇಷವಿಲ್ಲ ಮುಖ್ಯಮಂತ್ರಿಗಳು ಮಾಡಿದ್ದಾರೆ. ನೀವು ಹೇಗಾದರೂ ತಿಳಿದುಕೊಳ್ಳಿ” ಎಂದು ಹೇಳಿದರು.
ಕಳೆದ ಬುಧವಾರ ಬಳ್ಳಾರಿ ಎಸ್‌ಪಿಯಾಗಿದ್ದ ಡಾ. ಶೋಭಾ ರಾಣಿ ವಿ.ಜೆ ಅವರನ್ನು ಮಂಡ್ಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಪವನ್ ನೆಜ್ಜೂರು ಅವರನ್ನು ಬಳ್ಳಾರಿ ಎಸ್‌ಪಿಯಾಗಿ ನೇಮಕ ಮಾಡಲಾಗಿತ್ತು.
ಗುರುವಾರ ಪವನ್ ನೆಜ್ಜೂರು ಅಧಿಕಾರ ಸ್ವೀಕಾರ ಮಾಡಿದ್ದರು. ಅಂದು ರಾತ್ರಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಬ್ಯಾನರ್ ವಿಚಾರಕ್ಕೆ ಗಲಾಟೆ ನಡೆದಿತ್ತು. ನಾರಾ ಭರತ್ ರೆಡ್ಡಿ, ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗಲಭೆಯಾಗಿತ್ತು.
ಈ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಮೃತಪಟ್ಟಿದ್ದರು. ಗಲಭೆ ನಿಯಂತ್ರಿಸಲು ವಿಫಲವಾದ ಕಾರಣ ಸರ್ಕಾರ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿತ್ತು.
ಆ ಬಳಿಕ ಚಿತ್ರದುರ್ಗದ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅವರಿಗೆ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿತ್ತು. ಬುಧವಾರ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ಬಳ್ಳಾರಿ ನೂತನ ಎಸ್‌ಪಿಯಾಗಿ ನೇಮಿಸಲಾಗಿತ್ತು.
ಅಲ್ಲದೇ ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ನೂತನ ಐಜಿಪಿಯಾಗಿ ಡಾ.ಪಿ.ಎಸ್ ಹರ್ಷ ನೇಮಕ ಮಾಡಲಾಗಿತ್ತು. ಈಗ ಇಬ್ಬರು ಅಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದ್ದಾರೆ.

