ಬೆಂಗಳೂರು: ಬೇಸಿಗೆಯ ಬಿಸಿಲಿನಿಂದಾಗಿ ಹೆಚ್ಚು ದಾಹವಾಗುವುದು ಸಹಜ. ದೇಹದ ನೀರಿನಂಶವನ್ನು ಸಮತೋಲನದಲ್ಲಿಡಲು ನೀರು ಕುಡಿಯುವುದು ಒಳ್ಳೆಯ ಅಭ್ಯಾಸವೇ. ಆದರೆ, ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಮಾರಕವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಹೌದು. ಬೇಸಿಗೆಯ ಬಿಸಿಲಿನಿಂದ ಪಾರಾಗಲು ಅತಿಯಾಗಿ ನೀರು ಕುಡಿಯುವುದು ಒಳ್ಳೆಯದು ಎಂದು ನೀವು ಭಾವಿಸಿದ್ದರೆ ಈ ಸುದ್ದಿ ನಿಮಗಾಗಿ. ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವ ಭರದಲ್ಲಿ ಮಿತಿ ಮೀರಿ ನೀರು ಸೇವಿಸುವುದು ಸಕಾರಾತ್ಮಕ ಪರಿಣಾಮದ ಬದಲು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅತಿಯಾದ ನೀರು ಸೇವನೆಯಿಂದ ದೇಹದಲ್ಲಿನ ಲವಣಾಂಶಗಳ ಸಮತೋಲನ ತಪ್ಪಿ, ಪ್ರಾಣಾಪಾಯಕ್ಕೂ ಕಾರಣವಾಗಬಲ್ಲ ಸ್ಥಿತಿ ನಿರ್ಮಾಣವಾಗಬಹುದು ಎಂಬುದು ವೈದ್ಯಕೀಯ ಲೋಕದ ಆತಂಕವಾಗಿದೆ.
ಅತಿಯಾದ ನೀರು ಸೇವನೆಯಿಂದಾಗುವ ಸಮಸ್ಯೆಗಳು
- ಹೈಪೋನಾಟ್ರೀಮಿಯಾ (Hyponatremia): ರಕ್ತದಲ್ಲಿನ ಸೋಡಿಯಂ ಮಟ್ಟವು ದಿಢೀರನೆ ಕುಸಿಯುವುದರಿಂದ ಈ ಸ್ಥಿತಿ ಉಂಟಾಗುತ್ತದೆ. ಇದರಿಂದ ತಲೆತಿರುಗುವಿಕೆ, ವಾಂತಿ ಮತ್ತು ವಿಪರೀತ ಸುಸ್ತು ಕಾಣಿಸಿಕೊಳ್ಳಬಹುದು.
- ಎಲೆಕ್ಟ್ರೋಲೈಟ್ ಅಸಮತೋಲನ: ಅತಿಯಾಗಿ ನೀರು ಕುಡಿಯುವುದರಿಂದ ದೇಹದಲ್ಲಿನ ಅಗತ್ಯ ಲವಣಾಂಶಗಳು ಮೂತ್ರದ ಮೂಲಕ ಹೊರಹೋಗುತ್ತವೆ. ಇದರಿಂದ ಸ್ನಾಯುಗಳು ದೌರ್ಬಲ್ಯಕ್ಕೀಡಾಗಬಹುದು.
- ಮೆದುಳಿನ ಮೇಲೆಪರಿಣಾಮ: ದೇಹದಲ್ಲಿ ಸೋಡಿಯಂ ಪ್ರಮಾಣ ತೀರಾ ಕಡಿಮೆಯಾದಾಗ ಮೆದುಳಿನ ಜೀವಕೋಶಗಳಲ್ಲಿ ಊತ ಕಾಣಿಸಿಕೊಳ್ಳುವ ಅಪಾಯವಿರುತ್ತದೆ.
ದಿನಕ್ಕೆ ಎಷ್ಟು ನೀರು ಕುಡಿಯಬೇಕು?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ದಿನಕ್ಕೆ 2.5 ರಿಂದ 3.5 ಲೀಟರ್ ನೀರು ಸಾಕಾಗುತ್ತದೆ. ಆದರೆ ಇದು ವ್ಯಕ್ತಿಯ ದೈಹಿಕ ಶ್ರಮ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಪ ಸಮಯದಲ್ಲಿ 4-5 ಲೀಟರ್‌ಗಿಂತ ಹೆಚ್ಚು ನೀರು ಕುಡಿಯುವುದು ‘ವಾಟರ್ ಇಂಟಾಕ್ಸಿಕೇಶನ್’ಗೆ (Water Intoxication) ಕಾರಣವಾಗಬಹುದು.
ಸರಿಯಾದ ಹೈಡ್ರೇಶನ್‌ಗಾಗಿ ಈ ಟಿಪ್ಸ್ ಪಾಲಿಸಿ
- ಬಲವಂತವಾಗಿ ನೀರು ಕುಡಿಯಬೇಡಿ: ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಕುಡಿಯಿರಿ. ಬಾಯಾರಿಕೆಯಾದಾಗ ನೀರು ಕುಡಿಯುವುದು ಉತ್ತಮ.
- ನೀರಿನಂಶವಿರುವ ಆಹಾರ ಸೇವಿಸಿ: ಕೇವಲ ನೀರನ್ನೇ ಕುಡಿಯುವ ಬದಲು ಕಲ್ಲಂಗಡಿ, ಸೌತೆಕಾಯಿ ಮತ್ತು ಎಳನೀರನ್ನು ಸೇವಿಸಿ. ಇವು ದೇಹವನ್ನು ತಂಪಾಗಿರಿಸುತ್ತವೆ.
- “ಎಲೆಕ್ಟ್ರೋಲೈಟ್ಸ್ ಮುಖ್ಯ : ವಿಪರೀತ ಬೆವರುತ್ತಿದ್ದರೆ, ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಮ್ಮರಸ ಬೆರೆಸಿ ಕುಡಿಯಿರಿ. ಇದರಿಂದ ದೇಹಕ್ಕೆ ಅಗತ್ಯ ಲವಣಾಂಶಗಳು ಸಿಗುತ್ತವೆ.
- ಸ್ವಲ್ಪ ಸ್ವಲ್ಪವೇ ಕುಡಿಯಿರಿ: ಒಂದೇ ಬಾರಿಗೆ ಲೀಟರ್‌ಗಟ್ಟಲೆ ನೀರು ಕುಡಿಯುವ ಬದಲು, ದಿನವಿಡೀ ಸ್ವಲ್ಪ ಸ್ವಲ್ಪವಾಗಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

