ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2028ರ ಬಳಿಕ ಸುಮಾರು 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತಾರೆ ಎಂದು ನೊಣವಿನಕೆರೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ.
“ಡಿ.ಕೆ. ಶಿವಕುಮಾರ್ ಅವರಿಗೆ ಹಲವಾರು ಅಡೆತಡೆಗಳಿವೆ. ಆದರೂ ಅವರ ಹಿಂದೆ ನಾವಿದ್ದೇವೆ. ರಕ್ಷಾ ಕವಚವಾಗಿ ಅವರನ್ನು ನಾವು ಕಾಪಾಡುತ್ತೇವೆ. ಅವರು ಎಂದಿಗೂ ಜಯಶೀಲರಾಗಿರುತ್ತಾರೆ” ಎಂದು ಶ್ರೀಗಳು ಹೇಳಿದ್ದಾರೆ.
ಇದೇ ವೇಳೆ, 2028ರ ಬಳಿಕ ಡಿ.ಕೆ. ಶಿವಕುಮಾರ್ ಅವರು 8ರಿಂದ 10 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಶ್ರೀಗಳು ಭವಿಷ್ಯ ನುಡಿದಿರುವುದು ಇದೀಗ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮುಕ್ತಿ ಮಂದಿರಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್ ಅವರು ಅಲ್ಲಿ ಸಂಕಲ್ಪ ಮಾಡಿದ್ದು, ತಮ್ಮ ಆರೋಗ್ಯ, ಆಯುಷ್ಯ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮಳೆ ಹಾಗೂ ಉತ್ತಮ ಬೆಳೆಗಾಗಿ ಕೂಡ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಡಿಕೆಶಿ ಟ್ವೀಟ್
ಶ್ರೀ ವೀರ ಗಂಗಾಧರ ಅಜ್ಜಯ್ಯನವರ ಐಕ್ಯ ಕ್ಷೇತ್ರವಾದ ಗದಗ ಜಿಲ್ಲೆಯ ಶ್ರೀ ಮುಕ್ತಿ ಮಂದಿರಕ್ಕೆ ಇಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದೆನು. ಇದು ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸ್ಥಳ. ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಅಜ್ಜನವರ ಪುಣ್ಯ ಸಂದೇಶ ನಮಗೆಲ್ಲರಿಗೂ ಸದಾ ದಾರಿದೀಪ. ಈ ಸಂದರ್ಭದಲ್ಲಿ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಸಚಿವರಾದ ಶ್ರೀ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸೇರಿದಂತೆ ನಾಯಕರು, ಸ್ವಾಮೀಜಿಗಳು ಉಪಸ್ಥಿತರಿದ್ದರು ಎಂದು ಸಿಎಂ ಡಿಕೆಶಿ ಟ್ವೀಟ್ ಮಾಡಿದ್ದಾರೆ.

