ಮೈಸೂರು: ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡು, ಕೆ.ಆರ್. ನಗರ, ಹುಣಸೂರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಣೆ ನಡೆಸಿದ್ದಾರೆ.
ಬಳಿಕ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬರ ನಿರ್ವಹಣೆ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರು ಹಾಗೂ ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್, ಶಾಸಕರಾದ ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಮೈಸೂರು ಪ್ರಾದೇಶಿಕ ಆಯುಕ್ತರಾದ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಈ ಸಭೆಯ ಪ್ರಧಾನ ಉದ್ದೇಶ ಬರದ ಕುರಿತು ಪರಿಶೀಲನೆ ಮಾಡುವುದೇ ಆಗಿದೆ. ಸರ್ಕಾರ ಬರ ನಿರ್ವಹಣೆಯ ಕುರಿತು ಬಹಳ ಗಂಭೀರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರವನ್ನು ಹಗುರ ಮನಸ್ಥಿತಿಯಾಗಿ ಪರಿಗಣಿಸಬಾರದು. ಜನರ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಆಹಾರ, ಜೀವನೋಪಾಯಕ್ಕೆ ಅಗತ್ಯವಿರುವ ಉದ್ಯೋಗ, ಆರೋಗ್ಯ ಜಾನುವಾರುಗಳಿಗೆ ಮೇವು, ನೀರು ಮುಂತಾದವುಗಳನ್ನು ನೋಡಿಕೊಳ್ಳುವುದಾಗಿದೆ. ಇದನ್ನು ಕಂದಾಯ ಇಲಾಖೆಯು ಇತರೆ ಸಂಬಂಧಿತ ಇಲಾಖೆಗಳ ಜೊತೆ ಸೇರಿ ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದರು.
ಜೂನ್‌ನಿಂದ ಆಗಸ್ಟ್ ಅಂತ್ಯದವರೆಗೆ ಮೈಸೂರಿನಲ್ಲಿ ವಾಡಿಕೆ ಮಳೆ 310 ಮಿ.ಮೀ ಆಗಬೇಕಿತ್ತು, ಆದರೆ ಕೇವಲ 140 ಮಿ.ಮೀ ಮಳೆಯಾಗಿದೆ. ಅಂದರೆ, ಶೇ. 55 ರಷ್ಟು ತೀವ್ರ ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯು ಕೊರತೆ ಪಟ್ಟಿಯಲ್ಲಿದೆ. ಮೈಸೂರು ಜಿಲ್ಲೆಯಲ್ಲಿ ಜೂನ್‌ನಲ್ಲಿ ಶೇ. 56, ಜುಲೈನಲ್ಲಿ ಶೇ. 61 ಮತ್ತು ಆಗಸ್ಟ್‌ನಲ್ಲಿ ಶೇ. 45ರಷ್ಟು ಮಳೆ ಕೊರತೆ ದಾಖಲಾಗಿದೆ. ಮೈಸೂರು ಜಿಲ್ಲೆಯ 8 ತಾಲೂಕುಗಳನ್ನು (ಹೆಗ್ಗಡದೇವನಕೋಟೆ, ಹುಣಸೂರು, ಕೆ.ಆರ್. ನಗರ, ಮೈಸೂರು, ನಂಜನಗೂಡು, ಸಾಲಿಗ್ರಾಮ, ಸರಗೂರು, ಟಿ. ನರಸೀಪುರ) ‘ತೀವ್ರ’ (Severe) ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದರು
ಮೈಸೂರಿನಲ್ಲಿ ಜುಲೈ-2026 ರಿಂದ ಈಚೆಗೆ ಕೇವಲ 1.91 ಲಕ್ಷ ಮಾನವ ದಿನಗಳಷ್ಟು ಮಾತ್ರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆದರೆ ಕಳೆದ ವರ್ಷ ಇದೇ 2 ತಿಂಗಳುಗಳಲ್ಲಿ 4.33 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.55 ರಷ್ಟು ಕಡಿಮೆಯಾಗಿದೆ. ಉತ್ತಮ ಮಳೆ ಬಂದ ವರ್ಷ 4.33 ಲಕ್ಷ ಉದ್ಯೋಗ ಸೃಷ್ಟಿಯಾದರೆ ಈ ವರ್ಷ ಯಾಕೆ ಇಷ್ಟು ಕಡಿಮೆಯಾಗಿದೆ. ಜನರು ಉದ್ಯೋಗ ಕೇಳುತ್ತಿಲ್ಲವೇ? ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಅವರ ಅಧೀನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಕೃಷಿ ಬೆಳೆ ವಿಮೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ 49.64 ಲಕ್ಷ ರೈತರ ಅರ್ಜಿಗಳಿಗೆ ಹಾಗೂ 33,17,167 ಹೆಕ್ಟೇರ್ ಭೂಮಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ ಮೈಸೂರಿನಲ್ಲಿ ಕೇವಲ 20,836 ಜನ 8,046 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ? ರೈತರಿಗೆ ಉತ್ತೇಜನ ನೀಡುವ ಕೆಲಸಗಳನ್ನು ಯಾಕೆ ಮಾಡಲಿಲ್ಲ? ಬೇಜವಾಬ್ದಾರಿತನ ತೋರಿದರೆ ಸಹಿಸುವುದಿಲ್ಲ ಎಂದರು.
ನಾವು ಈಗಾಗಲೇ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಪರಿಶೀಲನಾ ಸಭೆಗಳನ್ನು ಮಾಡಿ ಮುಗಿಸಿದ್ದೇವೆ. ಸ್ವತಃ ನಾನು ಬೆಳಗಾವಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಪರಿಶೀಲನೆ ನಡೆಸಿದ್ದೇನೆ. ಸ್ಥಳ ಪರಿಶೀಲನೆ ಮಾಡಿದ್ದೇನೆ ಎಂದರು.

