ವಾಷಿಂಗ್ಟನ್: ಅಮೆರಿಕ ಸರ್ಕಾರದ ಪರಮ ಗುಪ್ತ ಪ್ರಯೋಗಾಲಯದಲ್ಲಿ ದಶಕಗಳಿಂದಲೂ ಹಾರುವ ತಟ್ಟೆಗಳು (UFO) ಮತ್ತು ಪರಗ್ರಹ ಜೀವಿಗಳ (UAP) ಬಗ್ಗೆ ರಹಸ್ಯ ಸಂಶೋಧನೆ ನಡೆಯುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ನೂತನ ಸಾಕ್ಷ್ಯಚಿತ್ರವೊಂದು ಎತ್ತಿದೆ. ‘ಸ್ಲೀಪಿಂಗ್ ಡಾಗ್’ (Sleeping Dog) ಹೆಸರಿನ ಈ ಸಾಕ್ಷ್ಯಚಿತ್ರವು ಸೋರಿಕೆಯಾದ ಕೆಲವು ದಾಖಲೆಗಳ ಆಧಾರದ ಮೇಲೆ ಅಮೆರಿಕದ ರಕ್ಷಣಾ ಇಲಾಖೆಯ ರಹಸ್ಯಗಳನ್ನು ಬಿಚ್ಚಿಡಲು ಸಜ್ಜಾಗಿದೆ.
ಸೋರಿಕೆಯಾದ ದಾಖಲೆಗಳಲ್ಲಿ ಏನಿದೆ? ಖ್ಯಾತ ತನಿಖಾ ಪತ್ರಕರ್ತ ಜೆರೆಮಿ ಕಾರ್ಬೆಲ್ ನಿರ್ಮಿಸಿರುವ ಈ ಚಿತ್ರವು, ನ್ಯೂ ಮೆಕ್ಸಿಕೋದ ಲಾಸ್ ಅಲಾಮೋಸ್ ನ್ಯಾಷನಲ್ ಲ್ಯಾಬೊರೇಟರಿ (LANL) ಗೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿದೆ. ಪ್ರಯೋಗಾಲಯದ ಮಾಜಿ ಸೈಬರ್ ಸೆಕ್ಯುರಿಟಿ ಮುಖ್ಯಸ್ಥರೊಬ್ಬರು ನಿಧನರಾದ ನಂತರ ಅವರ ಮಗನಿಗೆ ಕೆಲವು ನಿಗೂಢ ಸ್ಕೆಚ್‌ಗಳು, ಮೆಮೋಗಳು ಮತ್ತು ಪೋಲರಾಯ್ಡ್ ಫೋಟೋಗಳು ಸಿಕ್ಕಿವೆ. ಇವುಗಳಲ್ಲಿ 1991ರ ಏಪ್ರಿಲ್ 24 ರಂದು ನಡೆದ ಉನ್ನತ ಮಟ್ಟದ ಸಭೆಯ ಮಾಹಿತಿಯಿದ್ದು, ಅದರಲ್ಲಿ ಸಿಐಎ (CIA), ಎನ್ಎಸ್ಎ (NSA) ಮತ್ತು ಅಮೆರಿಕದ ಭೂಸೇನೆ ಹಾಗೂ ನೌಕಾಸೇನೆಯ ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ.
ವಿಜ್ಞಾನಿಗಳ ನಿಗೂಢ ಕಣ್ಮರೆ ಈ ಸಾಕ್ಷ್ಯಚಿತ್ರದಲ್ಲಿ ಕೇವಲ ಯುಎಫ್‌ಒ ಸಂಶೋಧನೆ ಮಾತ್ರವಲ್ಲದೆ, ಲಾಸ್ ಅಲಾಮೋಸ್ ಪ್ರಯೋಗಾಲಯಕ್ಕೆ ಸಂಬಂಧಿಸಿದ ವಿಜ್ಞಾನಿಗಳ ನಿಗೂಢ ಕಣ್ಮರೆಯ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
- ಆಂಥೋನಿ ಚಾವೆಜ್: 2025ರ ಮೇ ತಿಂಗಳಲ್ಲಿ ನಿವೃತ್ತ ಇಂಜಿನಿಯರ್ ಆಂಥೋನಿ ಅವರು ವಾಲಕ್ ಹೋದವರು ಮರಳಿ ಬಂದಿಲ್ಲ. ಅವರು ತಮ್ಮ ವಾಲೆಟ್ ಮತ್ತು ಕೀಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು.
- ಮೆಲಿಸ್ಸಾ ಕಾಸಿಯಾಸ್: 2025ರ ಜೂನ್‌ನಲ್ಲಿ ಪ್ರಯೋಗಾಲಯದ ಆಡಳಿತ ಸಹಾಯಕಿಯಾಗಿದ್ದ ಮೆಲಿಸ್ಸಾ ಅವರು ಮಗಳಿಗೆ ಊಟ ನೀಡಿ ಹಿಂದಿರುಗುವಾಗ ಕಣ್ಮರೆಯಾಗಿದ್ದಾರೆ. ಅವರ ಫೋನ್‌ಗಳು ರಿಸೆಟ್ ಆದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಸಂಶೋಧನೆಯ ವ್ಯಾಪ್ತಿ ಸೋರಿಕೆಯಾದ ದಾಖಲೆಗಳ ಪ್ರಕಾರ, ಅಮೆರಿಕವು 1987ರ ಫ್ಲೋರಿಡಾ ಮತ್ತು 1989ರ ಬೆಲ್ಜಿಯಂನಲ್ಲಿ ಕಂಡುಬಂದ ಹಾರುವ ತಟ್ಟೆಗಳ ಘಟನೆಗಳ ಬಗ್ಗೆ ತನಿಖೆ ನಡೆಸಿತ್ತು. ಅಲ್ಲದೆ, ರಷ್ಯಾ (ಅಂದಿನ ಸೋವಿಯತ್ ಒಕ್ಕೂಟ) ನೀಡಿದ ಮಾಹಿತಿಗಳು ಮತ್ತು ಎಂಐಟಿ (MIT), ಸ್ಟ್ಯಾನ್‌ಫೋರ್ಡ್ ಅಂತಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಸಂವೇದಕ (Sensors) ತಂತ್ರಜ್ಞಾನ ಅಭಿವೃದ್ಧಿಪಡಿಸುವ ಬಗ್ಗೆಯೂ ಚರ್ಚೆಗಳಾಗಿದ್ದವು ಎಂದು ಚಿತ್ರದಲ್ಲಿ ಹೇಳಲಾಗಿದೆ.
ಸದ್ಯಕ್ಕೆ ಈ ಯಾವುದೇ ಮಾಹಿತಿಯನ್ನು ಅಮೆರಿಕ ಸರ್ಕಾರ ಅಧಿಕೃತವಾಗಿ ಖಚಿತಪಡಿಸಿಲ್ಲ. ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್ ಮೂಲಕ ಜಗತ್ತಿನ ಮೊದಲ ಪರಮಾಣು ಬಾಂಬ್ ತಯಾರಿಸಿದ ಲಾಸ್ ಅಲಾಮೋಸ್ ಪ್ರಯೋಗಾಲಯವು ಈಗಲೂ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಈ ಸಾಕ್ಷ್ಯಚಿತ್ರವು ಮೇ 17 ರಂದು ಬಿಡುಗಡೆಯಾಗಲಿದ್ದು, ಜಗತ್ತಿನಾದ್ಯಂತ ಕುತೂಹಲ ಮೂಡಿಸಿದೆ.

