ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸ್ವಲ್ಪ ಬೈದರೂ ತಪ್ಪಾಗಿ ಬಿಡುತ್ತದೆ. ಬೈದು ಬುದ್ಧಿ ಹೇಳಿದರೆ ತಿದ್ದಿಕೊಳ್ಳುವುದನ್ನು ಬಿಟ್ಟು ಅದನ್ನೇ ಅವಮಾನವೆಂದು ನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರವನ್ನು ಮಕ್ಕಳು ಕೈಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತದ್ದೇ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸಾಂಬಾರ್ ಮಾಡಿಲ್ಲ ಎಂದು ತಂದೆ ಬೈದಿದ್ದಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ (22) ಆತ್ಮಹತ್ಯೆಗೆ ಶರಣಾದ ಯುವತಿ.
ಸೌಜನ್ಯ ತಂದೆ ನಟೇಶ್, ಮಗಳಿಗೆ ತರಕಾರಿ ತಂದು ಸಾಂಬಾರ್ ಮಾಡಲು ಹೇಳಿದ್ದರು. ಆದರೆ ತಂದೆ ನಿನ್ನೆ ಮಧ್ಯಾಹ್ನ ಊಟಕ್ಕೆ ಬಂದಾಗ ಮಗಳು ಸಾಂಬಾರ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಮಗಳಿಗೆ ಬೈದಿದ್ದಾರೆ.
ಮಗಳನ್ನು ಬೈದು ಪಕ್ಕದ ಮನೆಗೆ ಸಾಂಬಾರ್ ತರಲೆಂದು ಹೋಗಿದ್ದಾರೆ. ಈ ವೇಳೆ ಇತ್ತ ಸೌಜನ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿಇದ್ದಾಳೆ. ತಂದೆ ಮನೆಗೆ ಬಂದು ನೋಡುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದಳು.
ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

