ಬೆಂಗಳೂರು: ದೇವಾಲಯ ಮುಂಭಾಗ ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ರಾಮಚಂದ್ರರೆಡ್ಡಿ(48) ಮೃತ ವ್ಯಕ್ತಿ. ಆತನ ಪತ್ನಿ ನೀಡಿದ ದೂರಿನ ಮೇರೆಗೆ ಆರೋಪಿ ಹರೀಶ್ ಎಂಬಾತನನ್ನು ಕಾಡುಗೋಡಿ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ರಾಮಚಂದ್ರ ರೆಡ್ಡಿ ಪ್ರತಿದಿನ ಕೆಲಸ ಮುಗಿಸಿ ರಾತ್ರಿ ದೇವಾಲಯದ ಮುಂಭಾಗ ಮಲಗುತ್ತಿದ್ದ. ಶುಕ್ರವಾರ ತಡರಾತ್ರಿ 12:30 ವೇಳೆಗೆ ಆತನ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ರಾಮಚಂದ್ರ ರೆಡ್ಡಿ ಕೆಲವು ವರ್ಷದ ಹಿಂದೆ ಈರುಳ್ಳಿ ವ್ಯಾಪಾರಕ್ಕೆ ಬೆಂಗಳೂರಿಗೆ ಬಂದಿದ್ದ. ಕಾಡುಗೋಡಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದು, ಇದನ್ನು ಸಹಿಸದ ಹರೀಶ್ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಆರೋಪಿ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

