ಮೈಸೂರು: ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿವಾದದ ಬಳಿಕ ಸುದ್ದಿಯಲ್ಲಿರುವ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ತಮ್ಮ ವರ್ಗಾವಣೆ ಆದೇಶವನ್ನು ರದ್ದುಪಡಿಸಲು ಧನಂಜಯ್ ಅವರು ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ. ವರ್ಗಾವಣೆ ಆದೇಶವನ್ನು ಒಂದೇ ದಿನದಲ್ಲಿ ರದ್ದುಗೊಳಿಸಿ, ಅದೇ ಠಾಣೆಯಲ್ಲಿ ಮುಂದುವರೆದಿರುವ ಬಗ್ಗೆ ಆರೋಪಿಸಲಾಗಿದೆ.
ಈ ಹಿಂದೆ ಗಣಪತಿ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿ ಹಾಕಿರುವ ಆರೋಪಗಳು ಕೇಳಿ ಬಂದಿದ್ದು ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಈಗ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಕೂಡ, ಇನ್ಸ್‌ಪೆಕ್ಟರ್ ಧನಂಜಯ್ ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ ಮತ್ತು ಧರ್ಮಗಳ ನಡುವೆ ದ್ವೇಷ ಮೂಡಿಸುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರುದಾರ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.
ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್
ಮಂಗಳೂರು: ಎರಡು ದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಎಂಬಲ್ಲಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಮಹಿಳೆ ನೂರುನ್ನೀಸಾ ತನ್ನ ಹಾಗೂ ನಾದಿನಿಯ ಮಗು ಇಬರನ್ನೂ ಬಾವಿಗೆ ಎಸೆದಿದ್ದಳು. ತಕ್ಷಣ ಸ್ಥಳೀಯರು ಮಕ್ಕಳನ್ನು ಮೇಲಕೆತ್ತಿದ್ದರಾದರೂ ಓರ್ವ ಮಗು ಸಾವನ್ನಪ್ಪಿದ್ದು, ಇನ್ನೋರ್ವ ಮಗು ಬದುಕುಳಿದಿದೆ.
ನೂರುನ್ನಿಸಾಳ ವರ್ತನೆ ಇದೀಗ ಇಡೀ ಕುಟುಂಬ ಹಾಗೂ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ನೂರುನ್ನಿಸಾಗೆ ಮಾನಸಿಕ ಖಿನ್ನತೆ ಕಾಡಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ನೂರುನ್ನಿಸಾ ತನ್ನ ಇಬ್ಬರು ಮಕ್ಕಳು ಹಾಗೂ ನಾದಿನಿಯ ಮೂವರು ಮಕ್ಕಳೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ ಘಟನೆಗೂ ಒಂದು ವಾರದ ಹಿಂದೆ ಆಕೆ ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು.
ಹೆದರಿಕೆ, ಭಯ, ಆತಂಕ ಹಾಗೂ ಒಂಟಿತನದ ಬಗ್ಗೆ ಪತಿ ಸಿನಾನ್ ಬಳಿ ನೂರುನ್ನಿಸಾ ಹೇಳಿಕೊಂಡಿದ್ದರು. ಮನೆಯವರೊಂದಿಗೆ ಮಾತ್ರ ಎಂದಿನಂತೆ ಖುಷಿಯಾಗಿ ಹಾಗೂ ಆಪ್ತವಾಗಿಯೇ ವರ್ತಿಸುತ್ತಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 19 ರ ಶನಿವಾರ ಮಧ್ಯಾಹ್ನ ನಾದಿನಿ ನಮಾಜ್‌ಗೆ ತೆರಳಿದ್ದ ವೇಳೆ ನೂರುನ್ನಿಸಾ ನಾದಿನಿಯ ಮೂರು ವರ್ಷದ ಮಗುವನ್ನು ಬಾವಿಗೆ ಎಸೆದಿದ್ದರು. ಬಳಿಕ ತನ್ನ ಮೂರು ವರ್ಷದ ಮಗುವನ್ನೂ ಬಾವಿಗೆ ಎಸೆದಿದ್ದಳು. ಮೂರನೇ ಮಗುವನ್ನು ಬಾವಿಗೆ ಎಸೆಯಲು ಮುಂದಾದಾಗ ನಾದಿನಿ ತಡೆದಿದ್ದರು.
ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಬಳಿಕ ಪತಿ ಸಿನಾನ್ ಹಾಗೂ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ನೂರುನ್ನಿಸಾ, ತಾನು ಮಾಡಿದ್ದ ಕೃತ್ಯದ ಬಗ್ಗೆ ಪೊಲೀಸರ ಎದುರೂ ಒಪ್ಪಿಕೊಂಡಿದ್ದಾಳೆ. ಆದರೆ ಮಕ್ಕಳನ್ನು ಬಾವಿಗೆ ಎಸೆದ ಕಾರಣ ಏನು ಎಂಬುದನ್ನು ಮಾತ್ರ ನೂರುನ್ನಿಸಾ ಪೊಲೀಸರಿಗೆ ತಿಳಿಸಿಲ್ಲ. ಘಟನೆಯ ಬಳಿಕವೂ ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು.
ಐದು ವರ್ಷಗಳ ಹಿಂದೆ ಸಿನಾನ್ ಅವರನ್ನು ವಿವಾಹವಾಗಿ ಬಂದಿದ್ದ ನೂರುನ್ನಿಸಾ, ಪತಿಯೊಂದಿಗೆ ಅನ್ಯೋನ್ಯವಾಗಿಯೇ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮೂರೂವರೆ ವರ್ಷದ ಗಂಡು ಮಗುವಿನ ಜೊತೆಗೆ ಎರಡು ತಿಂಗಳ ಮತ್ತೊಂದು ಮಗು ಕೂಡ ಆಟವಾಡುತ್ತಿತ್ತು. ಇದ್ದಕ್ಕಿದ್ದಂತೆ ಮಕ್ಕಳನ್ನು ಎತ್ತಿಕೊಂಡು ಹೊರಟ ನೂರುನ್ನಿಸಾ, ಮಕ್ಕಳಿಬ್ಬರನ್ನೂ ಬಾವಿಗೆ ಎಸೆದು ಬಂದಿದ್ದಳು.
ಸದ್ಯ ನೂರುನ್ನಿಸಾಳನ್ನು ಪೊಲೀಸರು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ನೂರುನ್ನಿಸಾಳ ಹಿಂದಿನ ವರ್ತನೆ, ಆಕೆ ಪತಿಗೆ ಹೇಳಿಕೊಂಡಿದ್ದ ಭಯ-ಆತಂಕ ಹಾಗೂ ಘಟನೆ ನಡೆದ ಸಂದರ್ಭದಲ್ಲಿ ಆಕೆಯ ವರ್ತನೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

