HomeKarnatakaಜನರಿಗೆ ಅವಶ್ಯವಿರುವ ಸರ್ಕಾರಿ ಸೇವೆ ವಿಳಂಬ ಮಾಡುವುದೂ ಒಂದು ರೀತಿಯ ಅಪರಾಧವೇ: ಸಿಎಂ ಸಿದ್ದರಾಮಯ್ಯ

ಜನರಿಗೆ ಅವಶ್ಯವಿರುವ ಸರ್ಕಾರಿ ಸೇವೆ ವಿಳಂಬ ಮಾಡುವುದೂ ಒಂದು ರೀತಿಯ ಅಪರಾಧವೇ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜನರಿಗೆ ಅವಶ್ಯವಿರುವ ಸರ್ಕಾರಿ ಸೇವೆ ವಿಳಂಬ ಮಾಡುವುದೂ ಒಂದು ರೀತಿಯ ಅಪರಾಧವೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಶುಭ ಹಾರೈಸಿ, ಬಳಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೊಸ ವರ್ಷದ ಮೊದಲ ದಿನ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ, ಇಂಗ್ಲೀಷ್ ಕ್ಯಾಲೆಂಡರ್ ನಂತೆ ಪ್ರಾರಂಭವಾಗುವ ಹೊಸ ವರ್ಷವನ್ನು ವಿಶ್ವದಾದ್ಯಂತ ಸಂಭ್ರಮಾಚರಣೆಯಿಂದ ಸ್ವಾಗತಿಸಲಾಗುತ್ತದೆ. 2026ರ ವರ್ಷ ರಾಜ್ಯಕ್ಕೆ ಸಮೃದ್ಧಿಯನ್ನು ತರಲಿ ಹಾಗೂ ರಾಜ್ಯದ ಜನತೆ ಸುಖ, ಸಮೃದ್ಧಿ, ಶಾಂತಿಯಿಂದಿರಲಿ, ಬಡವರ ಹಾಗೂ ರೈತರ ಮೊಗದಲ್ಲಿ ಸಂತೋಷ ಸದಾ ಇರಲಿ ಎಂದು ಹಾರೈಸುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತಮ ಮಳೆ – ಬೆಳೆಯಿಂದ ಹೆಚ್ಚಿನ ಸಮಸ್ಯೆ ಪರಿಹಾರವಾಗುತ್ತದೆ. 2025 ರಲ್ಲಿ ಭಾರೀ ಮಳೆಯಾದ ಜೊತೆಗೆ ಬೆಳೆಹಾನಿಯೂ ಸಂಭವಿಸಿತು. 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರ ಎನ್ ಡಿಆರ್ ಎಫ್ ನಿಂದ ಹಾಗೂ ರಾಜ್ಯ ಸರ್ಕಾರ ಎಸ್ ಡಿ ಆರ್ ಎಫ್ ನಿಂದ ಪರಿಹಾರವನ್ನು ನೀಡುತ್ತದೆ. ರೈತರಿಗೆ ಹೆಚ್ಚಿನ ಪರಿಹಾರಗಳನ್ನು ಒದಗಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ರೈತರ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. 2025 ರಲ್ಲಿ ಖುಷ್ಕಿ, ನೀರಾವರಿ ಸೇರಿದಂತೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 8,500 ರೂ ಪರಿಹಾರ ನೀಡಲಾಗಿದ್ದು, ರೈತರಿಗೆ ತುಸು ನೆಮ್ಮದಿ ಕಾಣುವಂತಾಗಿದೆ ಎಂದರು.

ವಿರೋಧ ಪಕ್ಷಗಳು ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ. ರಾಜ್ಯದ ಎಲ್ಲ ಜನತೆಗೆ ನ್ಯಾಯ ಒದಗಿಸುವುದು ಅವಶ್ಯ. ಜನರಿಗೆ ಅವಶ್ಯವಿರುವ ಸರ್ಕಾರದ ಸೇವೆಗಳನ್ನು ವಿಳಂಬ ಮಾಡದೇ ಪೂರೈಸಬೇಕು. ವಿಳಂಬ ನೀತಿ ಅನುಸರಿಸುವುದೂ ಒಂದು ರೀತಿಯ ಅಪರಾಧವೇ ಆಗಿದೆ ಎಂದರು.

ಹೊಸ ವರ್ಷ ಜನರ ಕೆಲಸ ನಿರ್ವಹಿಸಲು ಹೊಸ ಉತ್ಸಾಹದಿಂದ ಶ್ರಮಿಸಬೇಕು. ಅಧಿಕಾರಿಗಳು 30-40 ವರ್ಷಗಳು ಅಧಿಕಾರದಲ್ಲಿದ್ದರೆ, ನಾವು ಅಧಿಕಾರದಲ್ಲಿ ಐದು ವರ್ಷಗಳು ಇರುತ್ತೇವೆ. ರಾಜ್ಯದ ಜನರು ನಿನ್ನೆ ಮತ್ತು ಇಂದು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ನೂತನ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ ನಡೆದಿದೆ. ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಇಲಾಖೆಗೆ ಅಭಿನಂದನೆಗಳು ಎಂದರು.

ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಅಧಿಕಾರಿಗಳು ಜಾತ್ಯತೀತವಾಗಿ, ಮಾನವೀಯ ನೆಲೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದ್ದಾರೆ.

ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಜೊತೆಗೆ ಪೊಲೀಸ್ ಇಲಾಖೆಯ ಐಜಿಪಿ ಮತ್ತು ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಸಿಎಫ್ ಮತ್ತು ಮೇಲ್ಮಟ್ಟದ ಅಧಿಕಾರಿಗಳು ಹೊಸ ವರ್ಷದ ಶುಭ ಹಾರೈಸಿದರು.

ಸರ್ಕಾರದ ಮುಖ್ಯಕಾರ್ಯದರ್ಶಿ ಡಾ||ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಸಲೀಂ ಸೇರಿ‌ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular