ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಈ ಯಶಸ್ಸಿನ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿ ದೀಪಿಕಾ ಪಡುಕೋಣೆ ಅವರ ‘ಮೌನ’ದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿತ್ತು. ಈ ಎಲ್ಲಾ ಟೀಕೆಗಳಿಗೆ ಭಾನುವಾರ ಮಧ್ಯಾಹ್ನ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ತೆರೆ ಎಳೆದಿದೆ. ಮುಂಬೈನಲ್ಲಿ ಲಂಚ್ ಡೇಟ್ ಮುಗಿಸಿ ಹೊರಬಂದ ದೀಪಿಕಾ ಮತ್ತು ರಣವೀರ್ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು.
ಅಭಿಮಾನಿಗಳ ಸಂಭ್ರಮ, ದೀಪಿಕಾ ನಗು: ರೆಸ್ಟೋರೆಂಟ್‌ನಿಂದ ರಣವೀರ್ ಸಿಂಗ್ ಹೊರಬರುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು “ಬಬ್ಬರ್ ಶೇರ್” (Babbar Sher) ಎಂದು ಕೂಗುತ್ತಾ ಜೈಕಾರ ಹಾಕಿದರು. ತನ್ನ ಪತಿಗೆ ಸಿಗುತ್ತಿರುವ ಈ ಅಭೂತಪೂರ್ವ ಸ್ವಾಗತ ಮತ್ತು ಪ್ರೀತಿಯನ್ನು ಕಂಡು ದೀಪಿಕಾ ಪಡುಕೋಣೆ ಮುಖದಲ್ಲಿ ಹೆಮ್ಮೆಯ ನಗು ಮಿಂಚುತ್ತಿತ್ತು. ಬಿಗಿ ಭದ್ರತೆಯ ನಡುವೆಯೂ ರಣವೀರ್ ಕೈಬೀಸಿ ಅಭಿಮಾನಿಗಳಿಗೆ ವಂದಿಸಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, “ದೀಪಿಕಾ ಅವರ ನಗುವೇ ಟೀಕಾಕಾರರಿಗೆ ನೀಡಿದ ಉತ್ತರ” ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.
ಏನಿದು ಸಾಮಾಜಿಕ ಜಾಲತಾಣದ ವಿವಾದ? ಕಳೆದ ಕೆಲವು ದಿನಗಳಿಂದ ದೀಪಿಕಾ ಪಡುಕೋಣೆ ಅವರು ‘ಧುರಂಧರ್ 2’ ಚಿತ್ರದ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಳ್ಳದಿರುವುದು ಮತ್ತು ಚಿತ್ರದ ಪ್ರೀಮಿಯರ್ ಶೋಗೆ ಗೈರಾಗಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಯಾಮಿ ಗೌತಮ್ ಚಿತ್ರದ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದರೆ, ದೀಪಿಕಾ ಮಾತ್ರ ಮೌನವಾಗಿದ್ದಾರೆ ಎಂದು ಕೆಲವರು ಹೋಲಿಕೆ ಮಾಡಿದ್ದರು. ಅಲ್ಲದೆ, ಪತಿಯ ಚಿತ್ರದ ಬದಲು ಸಂಗೀತ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಕ್ಕೂ ಟೀಕೆ ವ್ಯಕ್ತವಾಗಿತ್ತು.
ಆದರೆ, ಈಗ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ನಡುವೆ ಎಲ್ಲವೂ ಸುಸೂತ್ರವಾಗಿದೆ ಎಂಬ ಸಂದೇಶ ರವಾನಿಸಿದೆ. ದೀಪಿಕಾ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ರಣವೀರ್ ಅವರ ಯಶಸ್ಸನ್ನು ಅವರು ಸಂಭ್ರಮಿಸುತ್ತಿರುವುದು ಸ್ಪಷ್ಟವಾಗಿದೆ.

