HomeKarnatakaದೇಶದ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ನೀವು ಇಟಲಿಗೆ ಹೋಗ್ತೀರಿ, ನಾವೆಲ್ಲಿ ಹೋಗೋದು…? ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ...

ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ನೀವು ಇಟಲಿಗೆ ಹೋಗ್ತೀರಿ, ನಾವೆಲ್ಲಿ ಹೋಗೋದು…? ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಪ್ರಶ್ನೆ

ಶಿವಮೊಗ್ಗ: ಈ ದೇಶದ ಸ್ವಾತಂತ್ರ‍್ಯ ರಕ್ಷಿಸಲು 140 ಕೋಟಿ ಜನ ಇದ್ದಾರೆ. ಈ ದೇಶದ ಸ್ವಾತಂತ್ರ‍್ಯಕ್ಕೆ ಧಕ್ಕೆಯಾದರೆ ನೀವು ಇಟಲಿಗೆ ಹೋಗುತ್ತೀರಿ. ಆದರೆ ನಾವೆಲ್ಲಿ ಹೋಗೋದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಿ ಅರಾಜಕತೆ ನಿರ್ಮಿಸಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿ ಇಂದು ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ನಡೆದ ಬೃಹತ್ ಪಾದಯಾತ್ರೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು. ಈ ಪಾದಯಾತ್ರೆಯು ಫ್ರೀಡಂ ಪಾರ್ಕ್ ನಲ್ಲಿ ಕೊನೆಗೊಂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಂದು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಘೋಷಣೆ ಮೊಳಗಿತ್ತು ಎಂದರು. ಇಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತವನ್ನು ಅವಹೇಳನ ಮಾಡುತ್ತಾರೆ. ಪ್ರತಿಪಕ್ಷದ ನಾಯಕನೆಂದರೆ ಪ್ರಧಾನಿಗೆ ಸಮ. ಆದರೆ ಆ ಸ್ಥಾನದ ಗೌರವ ಉಳಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.

ಪ್ರತಿಪಕ್ಷದ ನಾಯಕ ಗಂಭೀರವಾಗಿ ಇರಬೇಕು. ಆದರೆ ರಾಹುಲ್ ಗಾಂಧಿ ಒಂದೇ ಒಂದು ದಿನ ಗಂಭೀರ ಚರ್ಚೆ ಮಾಡಿಲ್ಲ. ಕಣ್ಸನ್ನೆ ಮಾಡುವುದು, ಪ್ರಧಾನಿ ವಿರುದ್ಧ ಅವಹೇಳನಮಾಡುವುದು ಇವರ ಕೆಲಸ ಆಗಿದೆ. ಪಾರ್ಲಿಮೆಂಟ್ ನಲ್ಲಿ ಮಾತನಾಡಲು ಅವಕಾಶ ನೀಡಿದರೆ ಅವರ ಅಜ್ಜಿಯನ್ನು ಹೊಗಳುತ್ತಾರೆ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕಿದೆ. ಇಷ್ಟು ವರ್ಷ ಚುನಾವಣಾ ಆಯೋಗದ ಆಯುಕ್ತರನ್ನು ಯಾರೂ ಪ್ರಶ್ನಿಸಿರಲಿಲ್ಲ. ಆದರೆ ಈಗ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಂದು ಇವಿಎಂ ಬಗ್ಗೆ ಅವಮಾನ ಮಾಡುತ್ತೀರಿ. ಕೇರಳ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಇವಿಎಂ ಸರಿ ಇರುತ್ತೆ. ಆದರೆ ಬಿಜೆಪಿ ಗೆದ್ದರೆ ಇವಿಎಂ ಸರಿ ಇರುವುದಿಲ್ಲ. ಇದು ನಿಮ್ಮ ಅನುಮಾನ ಎಂದು ದೂರಿದರು.

ಈ ದೇಶದ ಸ್ವಾತಂತ್ರ‍್ಯ ರಕ್ಷಿಸಲು 140 ಕೋಟಿ ಜನ ಇದ್ದಾರೆ. ಈ ದೇಶದ ಸ್ವಾತಂತ್ರ‍್ಯಕ್ಕೆ ಧಕ್ಕೆಯಾದರೆ ನೀವು ಇಟಲಿಗೆ ಹೋಗುತ್ತೀರಿ. ಆದರೆ ನಾವೆಲ್ಲಿ ಹೋಗೋದು ಎಂದು ಪ್ರಶ್ನಿಸಿದ ಅವರು, ವಿಧಾನ ಪರಿಷತ್ತಿನಲ್ಲಿ ಬ್ಯಾಲೆಟ್ ನಲ್ಲಿ ಮತದಾನ ಆದರೂ ನೀವು ಗೆಲ್ಲೋಲ್ಲ. ಹಾಗಾದರೆ ನೀವು ಗೆಲ್ಲುವುದು ಎಲ್ಲಿ? ಮೋದಿ ಹೋಗಲ್ಲ ಮತ್ತೆ ಬರುತ್ತಾರೆ. ದೇಶದಲ್ಲಿನ ಅರಾಜಕತೆ ಹೋಗಲಾಡಿಸಲು ಮತ್ತೆ ಮೋದಿ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಅಂದರೆ ಅರಾಜಕತೆ, ಇಂಡಿ ಅಂದರೆ ಅರಾಜಕತೆ. ಪ್ರಧಾನಿ, ರಾಷ್ಟ್ರಪತಿ ಖುರ್ಚಿಗೆ ಅವಮಾನ ಮಾಡುತ್ತಾರೆ. ಅರಾಜಕತೆ ತೊಲಗಿಸಲು, ಪ್ರಜಾತಂತ್ರ ಉಳಿಸಲು ಎಲ್ಲರೂ ಪಣ ತೊಡಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ನವರು ಹತಾಶರಾಗಿ ಮೋದಿ ಟಾರ್ಗೆಟ್ ಮಾಡಿದರು. ಈಗ ಚುನಾವಣಾ ಆಯೋಗವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರ ಮುಲಾಜಿಗೆ ಮೋದಿ ಪ್ರಧಾನಿಯಾಗಿಲ್ಲ. ಜನರ ಅಭಿಲಾಶೆಯಂತೆ ಪ್ರಧಾನಿಯಾಗಿದ್ದಾರೆ. ಎಂದರು.

ಈ ಹಿಂದೆ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 42 ಎಂಪಿ ಸೀಟು. ಹೀಗಾಗಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಇರಲಿಲ್ಲ. ಈಗ ಎಸ್‌ಐಆರ್ ನೆಪದಲ್ಲಿ ಅರಾಜಕತೆ ಹುಟ್ಟು ಹಾಕುತ್ತೀರಿ ಎಂದ ಅವರು, ಡಿಕೆಶಿ ಯವರೇ ಎಸ್‌ಐಆರ್ ನಲ್ಲಿ ಅಕ್ರಮವಾಗಿದೆ ಎಂದಾದರೆ ಮತಪಟ್ಟಿ ಪರಿಷ್ಕರಣೆ ಮಾಡಿದ 58 ಸಾವಿರ ನೌಕರರ ಮೇಲೆ ಕೇಸು ಹಾಕಿ. ತಾಕತ್ತು ಆಗ ಗೊತ್ತಾಗುತ್ತದೆ. ಪರಿಷ್ಕರಣೆ ಮಾಡಿದವರು ಕೇಂದ್ರ ಸರ್ಕಾರಿ ನೌಕರರಲ್ಲ ಎಂದರು.

ಪ್ರಿಯಾಂಕ್ ಖರ್ಗೆ ಅಪ್ಪನ ಪುಣ್ಯ ಬಹಳ ದಿನ ಇರುವುದಿಲ್ಲ. ಉಪ್ಪರಿಗೆ ಮೇಲೆ ಕುಳಿತವರು ಕೆಳಗೆ ಬರಲೇ ಬೇಕು. ಅದಕ್ಕಾಗಿಯೇ ಪಾದಯಾತ್ರೆ ಮಾಡಿದ್ದು. ಕಾಂಗ್ರೆಸ್ ನವರಿಗೆ ಇವಿಎಂ ಮೇಲೆ ನಂಬಿಕೆ ಇಲ್ಲದಿದ್ದರೆ ರಾಜೀನಾಮೆ ನೀಡಿ. ಚುನಾವಣೆಗೆ ಹೋದರೆ ತಾಕತ್ತು ಏನೆಂದು ಗೊತ್ತಾಗುತ್ತದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪಾರ್ಲಿಮೆಂಟ್ ನಲ್ಲಿ ಮಾತನಾಡಲು ಅವಕಾಶ ನೀಡಿದರೆ ಅಲ್ಲಿ ಮಾತನಾಡದೆ ವಿದೇಶದಲ್ಲಿ ಮಾತನಾಡುತ್ತೀರಿ. ನೀವು ವಿದೇಶಿ ಸುಳಿಯಲ್ಲಿ ಸಿಕ್ಕಿದಿರಿ. ಮೋದಿಯಲ್ಲ. ಪಂಚ ಗ್ಯಾರಂಟಿ ಹೆಸರಿನಲ್ಲಿ ಚಕ್ಕಲಿ ಸುರಳಿ ತಿಂದಂತೆ ತಿಂದಿದ್ದೀರಿ. ದೀಪಾವಳಿ ಬಳಿಕ ವಿದ್ಯುತ್ ಬಿಲ್ ಕೂಡ ಜಾಸ್ತಿ ಮಾಡುತ್ತೀರಿ. ಇದು ನಿಮ್ಮ ಆರನೇ ಗ್ಯಾರಂಟಿಯಾಗಿದೆ. ಬೆಲೆ ಏರಿಕೆಯೇ ಇವರ ಅಜೆಂಡಾ ಆಗಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಹರತಾಳು ಹಾಲಪ್ಪ, ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಎನ್.ಕೆ. ಜಗದೀಶ್, ಅಶೋಕ್ ನಾಯ್ಕ್, ಬೆಳ್ಳಿ ಪ್ರಕಾಶ್ ಮೊದಲಾದವರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular