ಚಿಕ್ಕಬಳ್ಳಾಪುರ: ಅಂಗನವಾಡಿ ಮೇಲ್ಚಾವಣಿಯ ಸಿಮೆಂಟ್ ಪ್ಲಾಸ್ಟಿಂಗ್ ಕುಸಿದು ಬಿದ್ದು ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಮೇಲ್ಚಾವಣಿಯ ಸಿಮೆಂಟ್ ಪ್ಲಾಸ್ಟಿಂಗ್ ಏಕಾಅಏಕಿ ಕುಸಿದು ಬಿದ್ದಿದೆ. ಪರಿಣಾಮ ಜೀವಿಕ, ರಿತಿಕ್ಷಾ ಸೇರಿದಂತೆ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಶಿಥಿಲಗೊಂಡಿದ್ದರೂ ಅದರ ಕೆಳಗೇ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು.
ಗಾಯಗೊಂಡ ಮಕ್ಕಳನ್ನು ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಕ್ಕಳ ಸ್ಥಿತಿ ಕಂಡು ಆಸ್ಪತ್ರೆಯಲ್ಲಿ ಪೋಷಕರು ಕಣ್ಣೀರಿಟ್ಟಿದ್ದಾರೆ.

