ಉಡುಪಿ: ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ.
ಬಿಹಾರ ಮೂಲದ ಸೂರಜ್ (31) ಬಂಧಿತ ಆರೋಪಿ. ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಬಳಿ ವಿಶೇಷ ಕಾರ್ಯಾಚರಣೆ ನಡೆಸಿ, ಆರೋಪಿ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಶೂಟೌಟ್ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಸೂರಜ್ ವಿರುದ್ಧ ಈ ಪ್ರಕರಣದಲ್ಲಿ ಒಳಸಂಚು ರೂಪಿಸಿ, ಹಣಕಾಸು ಪೂರೈಕೆ ಮಾಡಿದ್ದ ಆರೋಪ ಇದೆ. ಈಗಾಗಲೇ ಬಂಧಿತರಾಗಿರುವ ಇರ್ಷಾದ್, ಚಿರಾಗ್, ಸದಾನಂದ ಹಾಗೂ ಕಿಶೋರ್ ಜೊತೆ ಸೂರಜ್ ಕೈಜೋಡಿಸಿದ್ದ ಎನ್ನಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.

