ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಆದರೆ ಕಾಂಗ್ರೆಸ್ ಭದ್ರಕೋಟೆಯಾದ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಚರ್ಚೆಯ ವಿಚಾರ.
ಶಾಮನೂರು ಕುಟುಂಬಕ್ಕೆ ಉಪ ಚುನಾವಣೆ ಟಿಕೆಟ್ ನೀಡಬೇಕು ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಕ್ಷೇತ್ರದ ಪಕ್ಷದ ಮುಖಂಡರು ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಹ ಇದ್ದರು.
ಮಾಜಿ ಸಚಿವರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಡಿ.ಕೆ.ಶಿವಕುಮಾರ್ ಅವರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ದಾವಣಗೆರೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಬೆಂಗಳೂರಿನ ಕುಮಾರಪಾರ್ಕ್ ಸರ್ಕಾರಿ ಗೃಹಕಚೇರಿಯಲ್ಲಿ ಸಭೆ ನಡೆಸಿದರು.
ಈ ಕುರಿತು ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಇಂದು ಕುಮಾರಪಾರ್ಕ್ ಸರ್ಕಾರಿ ಗೃಹಕಚೇರಿಯಲ್ಲಿ ದಾವಣಗೆರೆ ಶಾಸಕರು, ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ ಅವರ ನಾಯಕತ್ವದಲ್ಲಿ ಕಾರ್ಯಕರ್ತರು ನನ್ನನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು ಎಂದು ಹೇಳಿದ್ದಾರೆ.
ಟಿಕೆಟ್ ವಿಚಾರದಲ್ಲಿ ಜಟಾಪಟಿ
- ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 80,000ಕ್ಕೂ ಅಧಿಕ ಮುಸ್ಲಿಂ ಸಮುದಾಯದ ಜನರಿದ್ದಾರೆ. ಆದ್ದರಿಂದ ಟಿಕೆಟ್ ಮುಸ್ಲಿಂ ಸಮಯದಾಯಕ್ಕೆ ನೀಡಬೇಕು ಎಂಬುದು ಬೇಡಿಕೆಯಾಗಿದೆ.
- ಶಾಮನೂರು ಶಿವಶಂಕರಪ್ಪ ಅವರು ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವ ಭರವಸೆಯನ್ನು 2023ರ ಚುನಾವಣೆ ಸಂದರ್ಭದಲ್ಲಿ ನೀಡಿದ್ದರು ಎಂಬುದು ವಾದ.
- ಶಾಮನೂರು ಕುಟುಂಬದಲ್ಲಿ ಒಬ್ಬರು ಸಚಿವರು, ಒಬ್ಬರು ಸಂಸದರು ಇದ್ದಾರೆ. ಆದ್ದರಿಂದ ಉಪ ಚುನಾವಣೆ ಟಿಕೆಟ್ ಅನ್ನು ಕಾರ್ಯಕರ್ತರಿಗೆ ನೀಡಬೇಕು ಎಂಬುದು ಬೇಡಿಕೆಯಾಗಿದೆ.
ಶಾಮನೂರು ಶಿವಶಂಕರಪ್ಪ 2008, 2013, 2018 ಮತ್ತು 2023ರಲ್ಲಿ ಕ್ಷೇತ್ರದಲ್ಲಿ ಗೆದ್ದು ದಾವಣಗೆರೆ ದಕ್ಷಿಣವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಆದ್ದರಿಂದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕ್ಷೇತ್ರದ ಟಿಕೆಟ್ ಬಿಟ್ಟುಕೊಡಲು ತಯಾರಿಲ್ಲ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ಪುತ್ರ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ಕೇಳುತ್ತಿದ್ದಾರೆ. ಸಮರ್ಥ ಶಾಮನೂರು ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದು, ಚುನಾವಣೆ ತಯಾರಿಯಲ್ಲಿ ತೊಡಗಿದ್ದಾರೆ.
ಮುಂದಿನ ವಾರ ಕೇಂದ್ರ ಚುನಾವಣಾ ಆಯೋಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಕೆಪಿಸಿಸಿ ಉಪ ಚುನಾವಣೆ ತಯಾರಿ, ಅಭ್ಯರ್ಥಿ ಆಯ್ಕೆ ಕುರಿತು ಪರಿಶೀಲನೆ ನಡೆಸಲು ಸಚಿವರು, ಶಾಸಕರ ಸಮಿತಿಯನ್ನು ರಚನೆ ಮಾಡಿದೆ.

