ಕ್ರಿಕೆಟಿಗರು ಹಾಗೂ ನಟಿಯರ ನಡುವೆ ಡೇಟಿಂಗ್, ಲವ್, ಬ್ರೇಕಪ್.. ಹಾಗೊಮ್ಮೆ ಹೀಗೊಮ್ಮೆ ಮದುವೆ ಸುದ್ದಿಗಳು ಹೆಚ್ಚಾಗಿಯೇ ಕೇಳಿಬರುತ್ತಲೇ ಇರುತ್ತವೆ. ಇದಕ್ಕೆ ತಾಜಾ ಹಾಗೂ ವಿವಾದವಿಲ್ಲದ ಉದಾಹರಣೆಯೆಂದರೆ ಅದು ಕಿಂಗ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ.
ಕೆರಿಯರ್‌ನ ಉತ್ತುಂಗದಲ್ಲಿದ್ದ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರ ನಡುವೆ ಸಮ್‌ಥಿಂಗ್ ಈಸ್ ದೇರ್ ಎಂದು ಆರಂಭದಲ್ಲಿ ಶುರುವಾದ ಸುದ್ದಿಗಳನ್ನು ಜೋಡಿ ಎಲ್ಲ ಊಹಾಪೋಹ ಎನ್ನುತ್ತಲೇ ಈಗ ವಿವಾಹವಾಗಿ ಲಂಡನ್‌ನಲ್ಲಿ ಸುಖ ಜೀವನ ನಡೆಸುವ ಹಂತಕ್ಕೆ ಬಂದು ತಲುಪಿ ತಕರಾರಿಲ್ಲದೇ ಜೀವನ ನಡೆಸುತ್ತಿರುವ ಜೋಡಿ ಎನಿಸಿಕೊಂಡಿದೆ.
ಇನ್ನು ಇದೇ ಮಾದರಿಯನ್ನು ಅನುಸರಿಸಲು ಹೋಗಿ ಅತಿರೇಕ ಮಾಡಿಕೊಂಡು ವಿಚ್ಛೇದನದಿಂದ ಸುದ್ದಿಯಾದ ಕ್ರಿಕೆಟಿಗರ ಪಟ್ಟಿಯೇ ದೊಡ್ಡದಿದೆ. ಜತೆಗೆ ತಾವು ಏನು ಮಾಡದಿದ್ದರೂ ನಟಿಯರ ಜತೆ ಹೆಸರು ತಳುಕಿಹಾಕಿಕೊಂಡು ವಿವಾದದ ಸುದ್ದಿಗಳಲ್ಲಿ ಸದ್ದು ಮಾಡಿದ ಕ್ರಿಕೆಟಿಗರೂ ಸಹ ಇದ್ದಾರೆ.
ಇದೀಗ ಅಂತಹದ್ದೇ ಸುದ್ದಿಯೊಂದು ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಮಯದಲ್ಲಿ ಸದ್ದು ಮಾಡ್ತಿದೆ. ಹೌದು, ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡದಿದ್ದರೂ ತನ್ನ ಉತ್ತಮ ಆಟದಿಂದ ಕ್ರೀಡಾಭಿಮಾನಿಗಳ ಗಮನ ಸೆಳೆದ ತಿಲಕ್ ವರ್ಮಾ ಹೆಸರು ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಲೀಲಾ ಹೆಸರಿನ ಜತೆ ತಳುಕಿಹಾಕಿಕೊಂಡಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ಸುದ್ದಿ ಭಾರೀ ವೈರಲ್ ಆಗ್ತಿದೆ. ಇಬ್ಬರ ಫೋಟೊಗಳನ್ನು ಹಾಕಿ ಒಂದು ವರ್ಷದಿಂದ ಸದ್ದಿಲ್ಲದೇ ಡೇಟ್ ಮಾಡುತ್ತಿದ್ದಾರೆ ಎಂದು ಮೀಮ್ ಹಂಚಿಕೊಂಡಿದ್ದಾರೆ. ಈ ಮೀಮ್‌ಗಳಿಗೆ ವಿವಿಧ ಕಾಮೆಂಟ್‌ಗಳು ಹರಿದುಬಂದಿದ್ದು, ತಿಲಕ್ ವರ್ಮಾ ಏನ್ ಲಕ್ಕಿ ಗುರು ನೀನು ಎಂದು ಹೆಚ್ಚಾಗಿ ಕಾಮೆಂಟ್ ಮಾಡಿದ್ದಾರೆ.
ಆದರೆ ಈ ಕುರಿತು ತಿಲಕ್ ವರ್ಮಾ ಆಗಲಿ ಅಥವಾ ಶ್ರೀಲೀಲಾ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ, ಯಾವುದೇ ಕಾರ್ಯಕ್ರಮದಲ್ಲಿ ಇತರೆ ಜೋಡಿಗಳ ಹಾಗೆ ಕಾಣಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಖಾಸುಮ್ಮನೆ ವೈರಲ್ ಆಗುವ ಕಾರಣಕ್ಕಾಗಿ ಮೀಮ್ ಪೇಜ್ ಒಂದು ಹಂಚಿಕೊಂಡ ಪೋಸ್ಟ್ ಸದ್ಯ ಇಬ್ಬರ ನಡುವೆ ಪ್ರೀತಿ, ಗೀತಿ, ಇತ್ಯಾದಿ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುವ ಹಂತಕ್ಕೆ ತಂದು ತಲುಪಿಸಿದೆ.

