HomeKarnatakaಅಣೆಕಟ್ಟು ಸುರಕ್ಷತೆ ಚರ್ಚೆಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳ; ಸಿದ್ದರಾಮಯ್ಯ

ಅಣೆಕಟ್ಟು ಸುರಕ್ಷತೆ ಚರ್ಚೆಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳ; ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ನಗರದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವನ್ನು ಉದ್ಘಾಟಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿರುವ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಉದ್ಘಾಟಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಶ್ವಬ್ಯಾಂಕ್ ಉಪಾಧ್ಯಕ್ಷ ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾತನಾಡಿ ಮುಖ್ಯಮಂತ್ರಿಗಳು, ಬೆಂಗಳೂರು ನಗರವು ನಾವೀನ್ಯತೆ, ತಂತ್ರಜ್ಞಾನ ಮತ್ತು ಸಂಶೋಧನೆಯ ತವರೂರು. ಅಣೆಕಟ್ಟು ಸುರಕ್ಷತೆ ಮತ್ತು ಸ್ಥಿರತೆ ಕುರಿತ ಚರ್ಚೆಗೆ ಇದು ಅತ್ಯಂತ ಸೂಕ್ತವಾದ ಸ್ಥಳ ಎಂದು ನಾನು ಭಾವಿಸಿದ್ದೇನೆ. ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ  ಹೊಂದಿದ್ದೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಮ್ಮೇಳನವು ಜಾಗತಿಕ ಚೇತನವನ್ನು ಪ್ರತಿಬಿಂಬಿಸುತ್ತದೆ. ವಿವಿಧ ದೇಶಗಳ ತಜ್ಞರು, ನೀತಿ ನಿರೂಪಕರು ಹಾಗೂ ಅಭ್ಯಾಸಿಗಳು ಇಲ್ಲಿ ಒಟ್ಟುಗೂಡಿ ಅಣೆಕಟ್ಟು ಸುರಕ್ಷತೆ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಯ ಜವಾಬ್ದಾರಿ ಕುರಿತು ಚರ್ಚಿಸುತ್ತಿದ್ದೇವೆ. ಸುರಕ್ಷಿತ ಮತ್ತು ಭದ್ರವಾದ ಅಣೆಕಟ್ಟುಗಳು ಎಂಬ ವಿಷಯದಡಿ ಸಮ್ಮೇಳನ ಜರುಗುತ್ತಿದ್ದು,  ಅಣೆಕಟ್ಟು ಸುರಕ್ಷತೆ ಮತ್ತು ಸ್ಥಿರತೆಗೆ ಸಂಬಂಧಿಸಿದ ತುರ್ತು ಸಮಸ್ಯೆಗಳನ್ನು ನೇರವಾಗಿ ಕೇಂದ್ರೀಕರಿಸುತ್ತದೆ ಎಂದು ಹೇಳಿದರು.

ಅಣೆಕಟ್ಟುಗಳು ಕೇವಲ ಕಾಂಕ್ರೀಟ್ ಮತ್ತು ಉಕ್ಕಿನ ರಚನೆಗಳಲ್ಲ. ಭಾರತದ ಮೊದಲ ದೂರದರ್ಶಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ಇವು ನಮ್ಮ ಸಾಮೂಹಿಕ ಆಕಾಂಕ್ಷೆಗಳ ಸಂಕೇತಗಳು. ಕೃಷಿ ಸಮೃದ್ಧಿ ಮತ್ತು ಕೈಗಾರಿಕಾ ಪ್ರಗತಿಯ ಜೀವಾಳವೂ ಆಗಿವೆ. ಭಾರತದಲ್ಲಿ ಇಂದು 6,628 ನಿರ್ದಿಷ್ಟ ಅಣೆಕಟ್ಟುಗಳಿವೆ. ಈ ಮೂಲಕ ನಾವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಅಣೆಕಟ್ಟುಗಳನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ಕರ್ನಾಟಕದಲ್ಲಿ 231 ನಿರ್ದಿಷ್ಟ ಅಣೆಕಟ್ಟುಗಳಿದ್ದು, ದೇಶದಲ್ಲಿ ಆರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಬರಡು ಪ್ರದೇಶಗಳನ್ನು ಫಲವತ್ತಾದ ಬಯಲುಗಳಾಗಿ ಪರಿವರ್ತಿಸಿದ ನೀರಾವರಿ ಕಾಮಗಾರಿಗಳಿಗೆ ನೆರವು ಒದಗಿಸಲು ಅಸಾಧಾರಣ ದೂರದೃಷ್ಟಿಯನ್ನು ತೋರಿದರು. ನಂತರ ದೇವರಾಜ ಅರಸು ಅವರಿಂದ ಮೊದಲುಗೊಂಡು ನಂತರದಲ್ಲಿ ಬಂದ  ಆಡಳಿತವು, ಸಮಾನ ಪ್ರಾದೇಶಿಕ ಅಭಿವೃದ್ಧಿಗಾಗಿ ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸಿದರು. ಅಣೆಕಟ್ಟುಗಳು ಕರ್ನಾಟಕವನ್ನು ಸಾಮಾಜಿಕ, ಆರ್ಥಿಕ ಸ್ಥಿತಿಯನ್ನಲ್ಲದೆ  ಪರಿಸರವನ್ನೂ  ಮಾರ್ಪಡಿಸಿವೆ. ಮುಂಗಾರಿನ  ಅನಿಶ್ಚಿತತೆಯನ್ನು ಲಕ್ಷಾಂತರ ಜನರಿಗೆ ಭರವಸೆಯ ಜೀವಾಳವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ ಎಂದು ಬಣ್ಣಿಸಿದರು.

ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು

  • ಜಲವಿದ್ಯುತ್ ಮತ್ತು ಬಹುಪಯೋಗಿ ಜಲಾಶಯಗಳು ಅಪಾರ ಶಕ್ತಿ ಮತ್ತು ನೀರಿನ ಭದ್ರತೆಯನ್ನು ಒದಗಿಸುತ್ತಿವೆ. ಕರ್ನಾಟಕದ ಸ್ಥಾಪಿತ ಜಲವಿದ್ಯುತ್ ಸಾಮರ್ಥ್ಯ ಸುಮಾರು 4,800 ಮೆಗಾವ್ಯಾಟ್. ರಾಜ್ಯದ ಜಲಾಶಯಗಳಲ್ಲಿ ನೂರಾರು ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ. ಇದು ನೀರಾವರಿ ಮತ್ತು ನಗರಗಳ ನೀರಿನ ಅಗತ್ಯವನ್ನು ಪೂರೈಸುತ್ತಿದೆ.
  • ಕೃಷ್ಣಾ, ಕಾವೇರಿ ಮತ್ತಿತರ ನದಿಗಳ ಬಳಿ ನಿರ್ಮಿತವಾದ ಜಲಾಶಯ ಯೋಜನೆಗಳು, ಅಲ್ಲಿನ ಜಿಲ್ಲೆಗಳಲ್ಲಿ ಕೃಷಿ , ನೀರಿನ ಅಗತ್ಯಗಳು ಮತ್ತು ಜನಜೀವನವನ್ನು ಸುಸ್ಥಿರಗೊಳಿಸಿವೆ. ಈ ಲಾಭಗಳು ವ್ಯವಸ್ಥಿತ ಅಣೆಕಟ್ಟು ಸುರಕ್ಷತೆ, ಪುನರುಜ್ಜೀವನ ಮತ್ತು ಆಧುನಿಕ ಕಾರ್ಯಾಚರಣೆಗಳು ಆಯ್ಕೆಗಳಾಗಿರದೆ ಸುಸ್ಥಿರ ರಾಷ್ಟ್ರದ ಅಭಿವೃದ್ಧಿಗೆ ಅವಶ್ಯಕತೆಗಳಾಗಿವೆ ಎಂದು ಒತ್ತಿ ಹೇಳುತ್ತದೆ.
  • ಶೇಕಡಾ 70ರಷ್ಟು ಅಣೆಕಟ್ಟುಗಳು 25 ವರ್ಷಗಳಿಗೂ ಮೇಲ್ಪಟ್ಟು ಹಳೆಯದಾಗಿದ್ದು, ಇವುಗಳ ವ್ಯವಸ್ಥಿತ ಸುರಕ್ಷತಾ ಮೌಲ್ಯಮಾಪನ ಆಧುನೀಕರಣ ಮತ್ತು ಅಪಾಯ ಮುನ್ಸೂಚನೆಗಳನ್ನು ಒಳಗೊಂಡ ಕಾರ್ಯಾಚರಣೆಯನ್ನು ಕೈಗೊಳ್ಳುವ ತುರ್ತು ಇದೆ ಎಂದು ಸಾರುತ್ತಿವೆ.
  • ಪ್ರಸ್ತುತ ಹವಾಮಾನ ಬದಲಾವಣೆಯಿಂದ ಉಂಟಾಗುವ ನೀರಿನ ವೈಪರೀತ್ಯಗಳನ್ನು ನಾವು  ಎದುರಿಸುತ್ತಿದ್ದೇವೆ. ಭೂಕಂಪನದ ಅಪಾಯಗಳು, ಜಲಾಶಯಗಳಲ್ಲಿ ಹೂಳು ಶೇಖರಣೆ, ಹಳೆಯ ಕಟ್ಟಡಗಳ ಮೇಲಿನ ಒತ್ತಡ – ಇವೆಲ್ಲಾ ಸಂಕೀರ್ಣ ಮತ್ತು ಪರಸ್ಪರ ಸಂಬಂಧಿತ ಅಪಾಯಗಳನ್ನು ಸೃಷ್ಟಿಸಿವೆ. ಅಣೆಕಟ್ಟು ಸುರಕ್ಷತೆ ಈಗ ಕೇವಲ ತಾಂತ್ರಿಕ ವಿಚಾರವಾಗಿ ನಂತ್ರ ನೆನಪಿಸಿಕೊಳ್ಳುವ ವಿಷಯವಲ್ಲ, ಅದು ರಾಷ್ಟ್ರೀಯ ಭದ್ರತೆಯ ಅನಿವಾರ್ಯ ಅಂಶವಾಗಿದೆ.
  • ಅಣೆಕಟ್ಟು ಸುರಕ್ಷತೆ ಎನ್ನುವುದು ಒಂದೇ ಇಲಾಖೆಯ ಜವಾಬ್ದಾರಿಯಲ್ಲ. ಇದು ಎಲ್ಲರೂ ಹಂಚಿಕೊಳ್ಳಬೇಕಾದ ರಾಷ್ಟ್ರೀಯ ಕರ್ತವ್ಯ. ಇದಕ್ಕೆ ಎಲ್ಲಾ ಸಂಸ್ಥೆಗಳ ಸಂಘಟಿತ ಕ್ರಮಗಳ ಅಗತ್ಯವಿದೆ.
  • ಹವಾಮಾನ ಬದಲಾವಣೆ, ಎಂದೂ ಕಂಡರಿಯದ ಪ್ರವಾಹಗಳು, ದೀರ್ಘಕಾಲದ ಬರಗಾಲ, ಅನಿರೀಕ್ಷಿತ ನೀರಿನ ಹರಿವು – ಇವೆಲ್ಲಾ ಹಿಂದಿನ ಕಾಲದ ವಿನ್ಯಾಸದ ಅಂದಾಜುಗಳನ್ನೇ ತಿದ್ದಿ ಬರೆಯುವಂತೆ ಮಾಡಿವೆ.
  • ಹೂಳು ಶೇಖರಣೆ, ಪರಿಸರದ ಅವನತಿ, ಜಲಾಶಯಗಳಿಂದ ಉಂಟಾಗುವ ಪರಿಸರ ಬದಲಾವಣೆಗಳು – ಇವು ದೀರ್ಘಾವಧಿಯ ನೀರು ಸಂಗ್ರಹ ಸಾಮರ್ಥ್ಯಕ್ಕೆ ಮತ್ತು ನದಿಗಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular