ಬೆಂಗಳೂರು: ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು, ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅಧಿಕಾರ ಹಂಚಿಕೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೈಕಮಾಂಡ್ ತೀರ್ಮಾನದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕಿದ್ದಾರೆ. 140 ಶಾಸಕರೂ ನನ್ನ ಬೆಂಬಲಿಗರೇ. ಸಿಎಂ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ. ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.
ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
ರಾಜಕೀಯಕ್ಕಾಗಿ ದಾವೋಸ್ ಪ್ರವಾಸ ಕೈಬಿಟ್ಟಿರುವುದು ಸರಿಯಲ್ಲ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರ ಮಾತಿನಲ್ಲಿ ಅರ್ಥವಿದೆ. ತಪ್ಪು ಎಂದು ನಾನು ಹೇಳುವುದಿಲ್ಲ. ನಾಳೆ ಬೆಳಗ್ಗೆ ಈ ಪ್ರಶ್ನೆ ಕೇಳಿ ಎಂದರು.

