ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆ ಮತ್ತು ವಹಿವಾಟಿನತ್ತ ಜನರ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಕ್ರಿಪ್ಟೋ ಖರೀದಿಸುವುದು ಮಾತ್ರವಲ್ಲ, ಅದನ್ನು ಒಂದು ಡಿಜಿಟಲ್ ವ್ಯಾಲೆಟ್‌ನಿಂದ ಮತ್ತೊಂದು ವ್ಯಾಲೆಟ್‌ಗೆ ಸುರಕ್ಷಿತವಾಗಿ ವರ್ಗಾಯಿಸುವ ವಿಧಾನವೂ ತಿಳಿದಿರಬೇಕು. ತಪ್ಪಾದ ವಾಲೆಟ್ ವಿಳಾಸ ಅಥವಾ ನೆಟ್‌ವರ್ಕ್ ಆಯ್ಕೆ ಮಾಡಿದರೆ ಹಣವನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ಆದ್ದರಿಂದ, ಕ್ರಿಪ್ಟೋ ಟ್ರಾನ್ಸ್‌ಫರ್ ಮಾಡುವ ಮೊದಲು ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸರಿಯಾದ ಹಂತಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.
ಕ್ರಿಪ್ಟೋ ವರ್ಗಾವಣೆ ಎಂಬುದು ಅತ್ಯಂತ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಸಣ್ಣ ತಪ್ಪಾದರೂ ನಿಮ್ಮ ಹಣ ಶಾಶ್ವತವಾಗಿ ನಷ್ಟವಾಗುವ ಅಪಾಯವಿರುತ್ತದೆ. ಹಾಗಿದ್ದರೆ, ಸುರಕ್ಷಿತವಾಗಿ ಕ್ರಿಪ್ಟೋ ವರ್ಗಾಯಿಸಲು ಅನುಸರಿಸಬೇಕಾದ ಪ್ರಮುಖ ಹಂತಗಳು ಇಲ್ಲಿವೆ:
ವ್ಯಾಲೆಟ್ ಮತ್ತು ನೆಟ್‌ವರ್ಕ್ ಹೊಂದಾಣಿಕೆ ಪರಿಶೀಲಿಸಿ
ಮೊದಲಿಗೆ ನೀವು ಕ್ರಿಪ್ಟೋ ಕಳುಹಿಸುತ್ತಿರುವ ವ್ಯಾಲೆಟ್ ಮತ್ತು ಸ್ವೀಕರಿಸುವ ವ್ಯಾಲೆಟ್ ಎರಡನ್ನೂ ಸ್ಪಷ್ಟವಾಗಿ ಗುರುತಿಸಿಕೊಳ್ಳಿ. ನೀವು ಕಳುಹಿಸುತ್ತಿರುವ ನಿರ್ದಿಷ್ಟ ಟೋಕನ್ ಹಾಗೂ ಬ್ಲಾಕ್‌ಚೈನ್ ನೆಟ್‌ವರ್ಕ್ ಅನ್ನು ಸ್ವೀಕರಿಸುವ ವ್ಯಾಲೆಟ್ ಬೆಂಬಲಿಸುತ್ತದೆಯೇ ಎಂಬುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು.
ನೆಟ್‌ವರ್ಕ್ ಆಯ್ಕೆ ಸರಿಯಾಗಿರಲಿ
ಹಲವು ಕ್ರಿಪ್ಟೋ ಟೋಕನ್‌ಗಳು ಇಆರ್‌ಸಿ-20 (ERC-20), ಬಿಇಪಿ-20 (BEP-20) ನಂತಹ ವಿಭಿನ್ನ ಬ್ಲಾಕ್‌ಚೈನ್ ನೆಟ್‌ವರ್ಕ್‌ಗಳಲ್ಲಿ ಲಭ್ಯವಿರುತ್ತವೆ. ತಪ್ಪಾದ ನೆಟ್‌ವರ್ಕ್ ಆಯ್ಕೆ ಮಾಡಿದರೆ ನಿಮ್ಮ ಹಣ ಮಧ್ಯದಲ್ಲೇ ಸಿಲುಕಿ ನಷ್ಟವಾಗುತ್ತದೆ. ಆದ್ದರಿಂದ ಕಳುಹಿಸುವ ಮತ್ತು ಸ್ವೀಕರಿಸುವ ನೆಟ್‌ವರ್ಕ್ ಒಂದೇ ಆಗಿರಬೇಕು.
ಸ್ವೀಕರಿಸುವ ವಿಳಾಸ ಕಾಪಿ ಮಾಡಿ
ನಿಮ್ಮ ಪ್ರಕ್ರಿಯೆ ಆರಂಭಿಸುವ ಮುನ್ನ, ಹಣ ತಲುಪಬೇಕಾದ ವ್ಯಾಲೆಟ್‌ನಲ್ಲಿ ‘Deposit’ ಅಥವಾ ‘Receive’ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಕಾಣಿಸುವ ದೀರ್ಘವಾದ ವ್ಯಾಲೆಟ್ ವಿಳಾಸವನ್ನು ನಿಖರವಾಗಿ ‘Copy’ ಮಾಡಿಕೊಳ್ಳಿ. (ಕೈಯಿಂದ ಟೈಪ್ ಮಾಡಲು ಹೋಗದಿರಿ).
ವರ್ಗಾವಣೆ ಮಾಡುವ ಸರಳ ಹಂತಗಳು:
ಟೋಕನ್ ಆಯ್ಕೆ ಮಾಡಿ: ನಿಮ್ಮ ಮೂಲ ವ್ಯಾಲೆಟ್‌ನಲ್ಲಿ ಕಳುಹಿಸಲು ಬಯಸುವ ಕ್ರಿಪ್ಟೋ ನಾಣ್ಯವನ್ನು (ಉದಾ: USDT, BTC, ETH) ಆಯ್ಕೆ ಮಾಡಿ.
ವಿಳಾಸ ಪೇಸ್ಟ್ ಮಾಡಿ: ಕಾಪಿ ಮಾಡಿದ ಸ್ವೀಕರಿಸುವ ವ್ಯಾಲೆಟ್ ವಿಳಾಸವನ್ನು ‘Send Address’ ಜಾಗದಲ್ಲಿ ಸರಿಯಾಗಿ ಪೇಸ್ಟ್ ಮಾಡಿ.
ಮೊತ್ತ ನಮೂದಿಸಿ: ಎಷ್ಟು ಮೊತ್ತವನ್ನು ವರ್ಗಾಯಿಸಬೇಕು ಎಂಬುದನ್ನು ನಮೂದಿಸಿ ಮತ್ತು ನೆಟ್‌ವರ್ಕ್ ಅನ್ನು ಮತ್ತೊಮ್ಮೆ ಪರಿಶೀಲಿಸಿ.
ಗ್ಯಾಸ್ ಫೀಸ್/ನೆಟ್‌ವರ್ಕ್ ಶುಲ್ಕ: ಪ್ರತಿಯೊಂದು ಬ್ಲಾಕ್‌ಚೈನ್ ವಹಿವಾಟಿಗೂ ಸಣ್ಣ ಪ್ರಮಾಣದ ನೆಟ್‌ವರ್ಕ್ ಶುಲ್ಕ (Gas Fee) ಅನ್ವಯಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ನಷ್ಟ ತಡೆಯಲು ಈ ಸುರಕ್ಷತಾ ಸಲಹೆ ಪಾಲಿಸಿ:
ಪರೀಕ್ಷಾರ್ಥ ವರ್ಗಾವಣೆ ಮಾಡಿ: ದೊಡ್ಡ ಮೊತ್ತದ ಕ್ರಿಪ್ಟೋ ವರ್ಗಾಯಿಸುವಾಗ, ಮೊದಲು ತೀರ ಸಣ್ಣ ಮೊತ್ತವನ್ನು ಕಳುಹಿಸಿ ಪರೀಕ್ಷಿಸಿ. ಆ ಹಣ ಸರಿಯಾಗಿ ತಲುಪಿದೆ ಎಂದು ಖಚಿತವಾದ ಬಳಿಕವೇ ಬಾಕಿ ಮೊತ್ತವನ್ನು ಕಳುಹಿಸುವುದು ಜಾಣತನ.
ವಹಿವಾಟಿನ ದಾಖಲೆ ಇಟ್ಟುಕೊಳ್ಳಿ: ಪ್ರಕ್ರಿಯೆ ಮುಗಿದ ತಕ್ಷಣ ವಹಿವಾಟಿನ ದಿನಾಂಕ, ಸಮಯ, ಮೊತ್ತ ಮತ್ತು ನೆಟ್‌ವರ್ಕ್ ಐಡಿ ವಿವರಗಳನ್ನು ಸ್ಕ್ರೀನ್‌ಶಾಟ್ ಅಥವಾ ನೋಟ್ ರೂಪದಲ್ಲಿ ಕಾಯ್ದಿರಿಸಿ. ಇದು ಭವಿಷ್ಯದಲ್ಲಿ ಲೆಕ್ಕಪರಿಶೋಧನೆ ಹಾಗೂ ತೆರಿಗೆ ಪಾವತಿಯ ಸಂದರ್ಭದಲ್ಲಿ ನೆರವಿಗೆ ಬರುತ್ತದೆ.

