ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್ವಾಡ್ ಎಂಬಲ್ಲಿ ಮರಾಠಿ ನಟಿ ಸೊನಾಲಿ ಕುಲಕರ್ಣಿ ನಿವಾಸಕ್ಕೆ ನುಗ್ಗಿದ 24 ವರ್ಷದ ಯುವಕ ಚಾಕುವಿನಿಂದ ನಟಿಯ ತಂದೆಗೆ ಗಾಯ ಮಾಡಿದ ಘಟನೆ ವರದಿಯಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆ ವ್ಯಕ್ತಿ ಅಪಾರ್ಟ್ಮೆಂಟ್ಗೆ ನುಗ್ಗಿದ್ದು ಏಕೆ ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆಟಿಕೆ ಗನ್ ಹಾಗೂ ಚಾಕುವನ್ನ ಹಿಡಿದಿದ್ದ ವ್ಯಕ್ತಿಯು ಟೆರಾಸ್ ಏರಿ ಅಪಾರ್ಟ್ಮೆಂಟ್ನ ಒಳಕ್ಕೆ ನುಗ್ಗಿದ್ದಾನೆ ಎಂದು ಪಿಂಪ್ರಿ ಚಿಂಚ್ವಾಡ್ ಪೊಲೀಸರು ಹೇಳಿದ್ದಾರೆ.
ಮನೆಗೆಲಸದಾಕೆ ಈ ವ್ಯಕ್ತಿಯನ್ನ ಮೊದಲು ನೋಡಿದ್ದಾಳೆ. ಆತ ಪೊಲೀಸರ ಕೈನಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾನೆ.
ಬಳಿಕ ನಟಿಯ ತಂದೆ ಮನೋಹರ್ ಕುಲಕರ್ಣಿ ಈತನನ್ನ ಹಿಡಿಯಲು ಯತ್ನಿಸಿದ್ದು ಈ ವೇಳೆ ಚಾಕುವಿನಿಂದ ಸಣ್ಣಪುಟ್ಟ ಗಾಯವಾಗಿದೆ. ಇದಾದ ಬಳಿಕ ಅಪಾರ್ಟ್ಮೆಂಟ್ನಲ್ಲಿದ್ದ ಇತರರು ಈತನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಪೊಲೀಸರ ಕೈಗೊಪ್ಪಿಸಿದ್ದಾರೆ.
ವಿಚಾರಣೆಯ ವೇಳೆ ಈತ ನಾನು ನಟಿ ಸೋನಾಲಿ ಕುಲಕರ್ಣಿ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.