ಕೊಪ್ಪಳ: ಕೊಪ್ಪಳ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನವೆಂಬರ್ 10 ಅನ್ನು ಕೊನೆಯ ದಿನಾಂಕವಾಗಿ ಸರ್ಕಾರ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಪ್ರತಿ 5 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ 5 ವರ್ಷ ಪೂರೈಸಿದ ಒಟ್ಟು 7,38,156 ಫಲಾನುಭವಿಗಳ ಪೈಕಿ ಇದುವರೆಗೆ 6,34,672 ಫಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದು, ಶೇಕಡ 85 ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ 5,95,205 ಜನರು ನ್ಯಾಯಬೆಲೆ ಅಂಗಡಿಗಳ ಮೂಲಕ ಹಾಗೂ 39,467 ಜನರು ಅನ್ನ ಸೇವಾ ಆ್ಯಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ.
ಇನ್ನೂ ಸುಮಾರು 1,03,484 ಫಲಾನುಭವಿಗಳ ಇ-ಕೆವೈಸಿ ಕಾರ್ಯ ಬಾಕಿಯಿದೆ. ಈ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ನೀಡಬೇಕಾಗಿಲ್ಲ.
ಇ-ಕೆವೈಸಿ ಮಾಡಿಸುವುದು ಹೇಗೆ?
ಫಲಾನುಭವಿಗಳು ತಾವು ಪ್ರಸ್ತುತ ವಾಸವಿರುವ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಅಥವಾ ಗೂಗಲ್ ಪ್ಲೇ-ಸ್ಟೋರ್‌ನಿಂದ ‘ಅನ್ನ ಸೇವಾ’ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಮುಖಚರ್ಯೆ ಗುರುತಿನ (ಫೇಸ್ ಅಥೆಂಟಿಕೇಷನ್) ಮೂಲಕವೂ ತಮ್ಮ ಇ-ಕೆವೈಸಿ ಕಾರ್ಯವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.
ಆದ್ದರಿಂದ, ಇದುವರೆಗೆ ಇ-ಕೆವೈಸಿ ಮಾಡಿಸದ ಫಲಾನುಭವಿಗಳು ನವೆಂಬರ್ 10 ರೊಳಗಾಗಿ ತಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಕೊಪ್ಪಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಟಣೆ ತಿಳಿಸಿದೆ.
ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ
ಕೊಪ್ಪಳ: ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೂಲಕ ಡಿಜಿಟಲ್ ಮಾದರಿಯಲ್ಲಿ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಲು ವೇದಿಕೆಯನ್ನು ಒದಗಿಸುತ್ತಿದೆ.
ಕೇಂದ್ರ/ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು ಮತ್ತು ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಪಿಂಚಣಿದಾರರು ತಮ್ಮ ಮನೆ ಬಾಗಿಲಿಗೆ ಬರುವ ಅಂಚೆ ಸಿಬ್ಬಂದಿಯ ಮೂಲಕ ಈ ಸೇವೆಯನ್ನು ಪಡೆಯಬಹುದು. ಯಾವುದೇ ಅಡೆತಡೆಯಿಲ್ಲದೆ ಪಿಂಚಣಿಯನ್ನು ನಿರಂತರವಾಗಿ ಪಡೆಯಲು ಪಿಂಚಣಿದಾರರು ಪ್ರತಿವರ್ಷ ತಮ್ಮ ವಾರ್ಷಿಕ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ನೇರವಾಗಿ ಕಚೇರಿಗೆ ಹೋಗಿ ಪ್ರಮಾಣಪತ್ರ ಸಲ್ಲಿಸುವಲ್ಲಿ ಪಿಂಚಣಿದಾರರು ಎದುರಿಸುವ ತೊಂದರೆಯನ್ನು ತಪ್ಪಿಸಲು, ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಬಯೋಮೆಟ್ರಿಕ್ ದೃಢೀಕರಣ ಅಥವಾ ಫೇಸ್ ಆರ್‌ಡಿ ಆ್ಯಪ್ ಬಳಸಿ `ಜೀವನ್ ಪ್ರಮಾಣ’ ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಮನೆ ಬಾಗಿಲಲ್ಲೇ ಸಲ್ಲಿಸುವ ವ್ಯವಸ್ಥೆ ಮಾಡಿದೆ. ಕೇವಲ ರೂ.70/- ನಾಮಮಾತ್ರದ ಸೇವಾ ಶುಲ್ಕದೊಂದಿಗೆ, ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ, ಪಿಂಚಣಿ ಖಾತೆ ವಿವರಗಳು ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸಿ ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರದೇಶದ ಅಂಚೆ ಸಿಬ್ಬಂದಿಯ ಮೂಲಕ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.
ಕರ್ನಾಟಕದಲ್ಲಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ 9,700 ಕ್ಕೂ ಹೆಚ್ಚು ಅಂಚೆ ಕಚೇರಿಗಳ ಮೂಲಕ 11,000 ಕ್ಕೂ ಹೆಚ್ಚು ಅಂಚೆ ಸಿಬ್ಬಂದಿ (ಪೋಸ್ಟ್ಮೆನ್) ಮತ್ತು ಗ್ರಾಮೀಣ ಡಾಕ್ ಸೇವಕರು (ಜಿಡಿಎಸ್), ಆಧಾರ್ ಮೊಬೈಲ್ ಸಂಖ್ಯೆ ನವೀಕರಣ, 5 ವರ್ಷದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣಿ, ನೇರ ಲಾಭ ವರ್ಗಾವಣೆಗಾಗಿ (ಡಿಬಿಟಿ) ಆಧಾರ್ ಸಬಲಗೊಂಡ ಪಾವತಿ ವ್ಯವಸ್ಥೆ (ಎಇಪಿಎಸ್) ಹಣ ಹಿಂಪಡೆಯುವಿಕೆ ಮತ್ತು ಪಿಂಚಣಿದಾರರ ಡಿಜಿಟಲ್ ಜೀವನ್ ಪ್ರಮಾಣಪತ್ರ ಸಲ್ಲಿಕೆ ಮುಂತಾದ ವಿವಿಧ ಮನೆ ಬಾಗಿಲ ಸೇವೆಗಳಲ್ಲಿ ನಿರತರಾಗಿದ್ದಾರೆ.
ಸರ್ಕಾರವು 2014 ರಲ್ಲಿ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು (ಜೀವನ್ ಪ್ರಮಾಣ) ಪರಿಚಯಿಸಿತು. ಎಲ್ಲಾ ಪಿಂಚಣಿದಾರರಲ್ಲಿ ಜಾಗೃತಿ ಮೂಡಿಸಲು, ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲೂö್ಯ) ಅಂಚೆ ಸಿಬ್ಬಂದಿ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇಪಿಎಫ್‌ಒ ಮತ್ತು ದೂರಸಂಪರ್ಕ ಇಲಾಖೆಯ(Department of Telecom) ಪಿಂಚಣಿದಾರರಿಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ ವಿತರಣೆಯು ಪಿಂಚಣಿದಾರರಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಈ ಸೇವೆಯನ್ನು 2026 ರ ನವೆಂಬರ್ 1 ರಿಂದ ಎಲ್ಲ ಅಂಚೆ ಕಚೇರಿಗಳಲ್ಲಿ ಪಡೆದುಕೊಳ್ಳಬಹುದು.
ಕೇಂದ್ರ/ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು, ಇಪಿಎಫ್‌ಒ ಪಿಂಚಣಿದಾರರು ಮತ್ತು ಇತರ ಎಲ್ಲಾ ಅರ್ಹ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಲು ತಮ್ಮ ಪ್ರದೇಶದ ಅಂಚೆ ಸಿಬ್ಬಂದಿಯ ಮೂಲಕ ಅಂಚೆ ಇಲಾಖೆ ಒದಗಿಸುವ ಮನೆ ಬಾಗಿಲ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಪ್ಪಳ ವಿಭಾಗದ ಅಂಚೆ ಅಧೀಕ್ಷಕ ನಾಗರಾಜ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

