ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ತೆರವು ಕಾರ್ಯಾಚರಣೆ ಬಳಿಕ ಸಿಎಂ ಸಿದ್ದರಾಮಯ್ಯ ಕೇರಳದಲ್ಲಿದ್ದಾರೆ. ಅವರು ಕೇರಳ ಸಿಎಂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಸದ ಕೆ.ಸಿ.ವೇಣುಗೋಪಾಲ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.
ಬುಧವಾರ ಸಿಎಂ ಸಿದ್ದರಾಮಯ್ಯ ಕೇರಳ ಪ್ರವಾಸದಲ್ಲಿದ್ದಾರೆ. ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ಸರ್ಕಾರದ ಸಚಿವ ವಿ.ಎನ್.ವಾಸವನ್, ಸಂಸದ ಕೆ.ಸಿ.ವೇಣುಗೋಪಾಲ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ಕೋಗಿಲು ಬಡಾವಣೆ ವಿವಾದ: ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಸುಮಾರು 167 ಶೆಡ್‌ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಸರ್ಕಾರದ ಜಾಗವಾಗಿದ್ದರಿಂದ ಅವರೆಲ್ಲರಿಗೂ ನೋಟಿಸ್ ನೀಡಿ, ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಅವರು ಖಾಲಿ ಮಾಡಿರಲಿಲ್ಲ. ಅನಿವಾರ್ಯವಾಗಿ ತೆರವು ಮಾಡಲಾಗಿತ್ತು.
ಆದರೆ ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ನ್ಯಾಯಕ್ಕೆ ಹೋಲಿಕೆ ಮಾಡಿದ್ದರು. ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು.
ಈ ವಿಚಾರದಲ್ಲಿ ಕೆ.ಸಿ.ವೇಣುಗೋಪಾಲ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿದ್ದರು. ಕೇರಳದ ಶಾಸಕರು ಸಹ ಕೋಗಿಲು ಪ್ರದೇಶಕ್ಕೆ ಬಂದು ಜನರ ಸಮಸ್ಯೆ ಆಲಿಸಿದ್ದರು. ಕೇರಳ ರಾಜ್ಯ ಕರ್ನಾಟಕವನ್ನು ನಿಯಂತ್ರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.
ಈ ವಿವಾದದ ಬಳಿಕ ಮೊದಲ ಬಾರಿಗೆ ಸಿದ್ದರಾಮಯ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಈಗಾಗಲೇ ಶೆಡ್‌ಗಳನ್ನು ಕಳೆದುಕೊಂಡ ಜನರ ನೆರವಿಗೆ ಧಾವಿಸಿದೆ. ಅವರಿಗೆ ಮನೆಗಳನ್ನು ನೀಡುವ ಹೊಣೆಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನೀಡಲಾಗಿದೆ.
ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳು
- ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
- ಕಸ ವಿಲೇವಾರಿ ಮಾಡುವ ಉದ್ದೇಶಕ್ಕೆ 15 ಎಕರೆ ಈ ಜಮೀನನ್ನು ಜಿಲ್ಲಾಧಿಕಾರಿಗಳು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು. ಪಾಲಿಕೆಯವರು ಕಸ ಹಾಕುತ್ತಿದ್ದು, ಭೂಮಿ ಅವರ ಸ್ವಾಧೀನದಲ್ಲೇ ಇದೆ. ಸುಮಾರು 2020-21 ರಿಂದ ಈ ರೀತಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡು ವಾಸ ಮಾಡುತ್ತಿದ್ದರು.
- ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ. ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿ ವಾಸವಿದ್ದವರಲ್ಲಿ ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ, ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಅಕ್ರಮ ಶೆಡ್‌ಗಳ ತೆರವುಗೊಳಿಸಿದ ವಿಚಾರದ ಬಗ್ಗೆ ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಸಿದ್ದರಾಮಯ್ಯ ಜೊತೆ ಮತ್ತು ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದರು. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಲಾಗಿದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಊಟ, ವಸತಿ, ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ. ಬೈಯ್ಯಪ್ಪನಹಳ್ಳಿಯ ಸರ್ವೇ ನಂ.23 ರಲ್ಲಿ ಸುಮಾರು 1,087 ಮನೆಗಳಿವೆ, ಅಧಿಕಾರಿಗಳಿಂದ ಅರ್ಹರ ಪಟ್ಟಿ ಬಂದ ನಂತರ ಅವರಿಗೆ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆ ಮಾಡಲಾಗುತ್ತದೆ.
- ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದು ಇದೊಂದು ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ. ಅಕ್ರಮವಾಗಿ ಶೆಡ್ ನಿರ್ಮಿಸಲು ಬಿಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

