ಬಳ್ಳಾರಿ : ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ‘ಸಿಬಿಐ’ (CBI) ಶಾಕ್ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಲಾಗಿದೆ.
ನಾಲ್ವರು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ವಿಶ್ವನಾಥ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ.ದಾಳಿ ನಡೆಸಿದ ಅಧಿಕಾರಿಗಳು ವಿಶ್ವನಾಥ್ ಸಹೋದರನನ್ನು ಬ್ರೂಸ್ ಪೇಟೆ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವನಾಥ್ ಇಲ್ಲದಿರುವ ಹಿನ್ನೆಲೆ ಅವರ ಸಹೋದರ ಮಹೇಶ್ ನನ್ನು ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿಗಳ ಹಗರಣವು ನಿಗಮದ ನಿಧಿಯನ್ನು ನಕಲಿ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದು, ಇದರಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಸುಮಾರು ₹187 ಕೋಟಿ ಅಕ್ರಮದ ಆರೋಪವಿದ್ದು, ತನಿಖೆ ಮುಂದುವರೆದಿದ್ದು, ಬಿ. ನಾಗೇಂದ್ರ ಸೇರಿದಂತೆ ಹಲವರ ಆಸ್ತಿಗಳನ್ನು ED ಜಪ್ತಿ ಮಾಡಿದೆ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ್ ಆತ್ಮಹತ್ಯೆ ಮತ್ತು ಡೆತ್ ನೋಟ್ನಿಂದ ಪ್ರಕರಣ ಬೆಳಕಿಗೆ ಬಂತು. ಅವರು ಡೆತ್ ನೋಟ್ನಲ್ಲಿ ಮೇಲಧಿಕಾರಿಗಳ ಆದೇಶದಂತೆ ಹಣ ವರ್ಗಾವಣೆಯಾದ ಬಗ್ಗೆ ಆರೋಪಿಸಿದ್ದರು. ಹಣವನ್ನು ಚುನಾವಣಾ ವೆಚ್ಚಗಳು, ಐಷಾರಾಮಿ ವಾಹನಗಳ ಖರೀದಿ ಮತ್ತು ವೈಯಕ್ತಿಕ ಉದ್ದೇಶಗಳಿಗೆ ಬಳಸಲಾಗಿದೆ ಎಂದು ED ಆರೋಪಿಸಿದೆ.

