ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ವಾಲ್ತೇರು ವೀರಯ್ಯ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ನಿರ್ದೇಶಕ ಬಾಬಿ ಕೊಳ್ಳಿ ಹಾಗೂ ಚಿರಂಜೀವಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 158ನೇ ಸಿನಿಮಾದ ಟೈಟಲ್ ಗ್ಲಿಂಪ್ಸ್ ಇಂದು ಬಿಡುಗಡೆಯಾಗಿದೆ.
ಈ ಮೆಗಾ ಪ್ರಾಜೆಕ್ಟ್ಗೆ ‘ಕಾಕಾ’ ಎಂದು ಹೆಸರಿಡಲಾಗಿದ್ದು, ಬಿಡುಗಡೆಯಾದ ಗ್ಲಿಂಪ್ಸ್ ಮಾಸ್ ಹಾಗೂ ಸ್ಟೈಲಿಶ್ ಲುಕ್ನಿಂದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಆಕ್ವಾ ಫ್ಯಾಕ್ಟರಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುವ ಸತ್ಯಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಊರಿನಲ್ಲೆಲ್ಲಾ ಗೌರವ ಗಳಿಸಿರುವ ಸಾಮಾನ್ಯ ವ್ಯಕ್ತಿಯಾಗಿ ಇವರು ಕಾಣಿಸಿಕೊಂಡರೂ, ಕಥೆಯಲ್ಲೊಂದು ದೊಡ್ಡ ಟ್ವಿಸ್ಟ್ ಇದೆ. ಸತ್ಯಂ ಎಂಬ ಈ ಸಾಮಾನ್ಯ ವ್ಯಕ್ತಿಯ ಹಿಂದೆ ಒಬ್ಬ ಪವರ್ಫುಲ್ ಗ್ಯಾಂಗ್ಸ್ಟಾರ್ ಅಡಗಿದ್ದಾನೆ ಎಂಬ ಸುಳಿವನ್ನು ಗ್ಲಿಂಪ್ಸ್ ಕೊನೆಯಲ್ಲಿ ನೀಡಲಾಗಿದೆ.
ಚಿರಂಜೀವಿ ಅವರ ಎಂಟ್ರಿ ಸೀನ್ಗೆ ಬ್ಯಾಕ್ಗ್ರೌಂಡ್ನಲ್ಲಿ ಬರುವ ಗ್ಯಾಂಗ್ ಲೀಡರ್ ಮ್ಯೂಸಿಕ್ ಅಭಿಮಾನಿಗಳಿಗೆ ರೊಮಾಂಚನ ಉಂಟುಮಾಡುತ್ತದೆ. ಪ್ರಸಿದ್ಧ ಸಂಗೀತ ನಿರ್ದೇಶಕ ತಮನ್ ಈ ಚಿತ್ರಕ್ಕೆ ಶಕ್ತಿಶಾಲಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ನಟಿ ಅನಸ್ವರ ರಾಜನ್ ಈ ಚಿತ್ರದಲ್ಲಿ ಚಿರಂಜೀವಿ ಅವರ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ವಾಣಿಜ್ಯ ಅಂಶಗಳ ಜೊತೆಗೆ ಉತ್ತಮ ಕಥಾವಸ್ತು ನೀಡುವಲ್ಲಿ ಸಫಲರಾಗಿರುವ ನಿರ್ದೇಶಕ ಬಾಬಿ, ಮತ್ತೊಮ್ಮೆ ಮಾಸ್ ಚಿತ್ರ ಪ್ರಿಯರಿಗೆ ಸೌಂಡ್ ಮಾಡುವ ಸೂಚನೆ ನೀಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಮುಂಬರುವ 2027ರ ಜನವರಿ 13ರಂದು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಥಿಯೇಟರ್ಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.

