ಬೆಂಗಳೂರು: ಖ್ಯಾತ ರಂಗ ನಿರ್ದೇಶಕರು, ಚಿಂತಕರು ಆದ ಚಿದಂಬರರಾವ್ ಜಂಬೆ ನಿಧನರಾಗಿದ್ದು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ.
ಚಿದಂಬರರಾವ್ ಜಂಬೆ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ತಮ್ಮ ಪ್ರಯೋಗಶೀಲತೆ, ರಂಗಚಿಂತನೆಗಳ ಮೂಲಕ ಕನ್ನಡದ ರಂಗಭೂಮಿಯ ಅನನ್ಯ ಪರಂಪರೆಗೆ ಕಸುವು ತುಂಬಿದ ಅಗ್ರಗಣ್ಯರ ಸಾಲಿನಲ್ಲಿ ಜಂಬೆಯವರ ಹೆಸರು ಅಜರಾಮರ. ಪ್ರಾಧ್ಯಾಪಕರಾಗಿ, ರಂಗ ಶಿಕ್ಷಕರಾಗಿ, ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ನಾಡಿನಾದ್ಯಂತ ನೂರಾರು ಪ್ರತಿಭೆಗಳಿಗೆ ರಂಗ ದೀಕ್ಷೆ ಕೊಟ್ಟ ಮಹನೀಯರು. ಅವರನ್ನು ಕಳೆದುಕೊಂಡು ನಾಡಿನ ಕಲಾಲೋಕ ಇಂದು ಬಡವಾಗಿದೆ. ಚಿದಂಬರರಾವ್ ಜಂಬೆ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಶೋಕತಪ್ತ ಕುಟುಂಬದವರ ದುಃಖದಲ್ಲಿ ನಾನೂ ಭಾಗಿ ಎಂದು ತಿಳಿಸಿದ್ದಾರೆ.
ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ
ಶಿವಮೊಗ್ಗ: ನಾಟಕ ನಿರ್ದೇಶನ, ರಂಗಶಿಕ್ಷಣ ಹಾಗೂ ಪ್ರಯೋಗಶೀಲ ರಂಗಚಟುವಟಿಕೆಗಳ ಮೂಲಕ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ್ದ ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನರಾಗಿದ್ದಾರೆ. ನೂರಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ನೀಡಿದ್ದ ಅವರು, ಹಲವು ತಲೆಮಾರುಗಳ ರಂಗಕಲಾವಿದರನ್ನು ರೂಪಿಸಿದ ಹಿರಿಯ ರಂಗ ಗುರುಗಳಾಗಿದ್ದರು.
ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದವರಾದ ಚಿದಂಬರರಾವ್ ಜಂಬೆ ಅವರು 1949ರ ಜನವರಿ 3ರಂದು ಜನಿಸಿದ್ದರು. ಕೆಳದಿ, ಸಾಗರದಲ್ಲಿ ಶಿಕ್ಷಣ ಪಡೆದ ಅವರು ಯಕ್ಷಗಾನ ತರಬೇತಿಯನ್ನೂ ಪಡೆದಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಲೇ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಶಿಕ್ಷಣ ಪಡೆದ ಬಳಿಕ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಪ್ರಯೋಗಶೀಲ ಶೈಲಿ ರೂಪಿಸಿಕೊಂಡರು.
ಹೆಗ್ಗೋಡಿನ ನೀನಾಸಂ ಜತೆಗಿನ ಒಡನಾಟ ಅವರ ರಂಗಜೀವನದ ಪ್ರಮುಖ ಘಟ್ಟವಾಗಿತ್ತು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನೇತೃತ್ವದ ಜವಾಬ್ದಾರಿಯಲ್ಲೂ ಹಾಗೂ ಸಾಣೆಹಳ್ಳಿಯ ರಂಗಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಅಭಿನಯ, ನಿರ್ದೇಶನ, ರಂಗಸಜ್ಜಿಕೆ ಹಾಗೂ ತಂಡದ ಕೆಲಸ ಸೇರಿದಂತೆ ರಂಗಭೂಮಿಯ ವಿವಿಧ ಆಯಾಮಗಳಲ್ಲಿ ಹಲವು ಕಲಾವಿದರಿಗೆ ತರಬೇತಿ ನೀಡಿದ್ದರು. ‘ಚೆರ್ರಿ ಹಣ್ಣಿನ ತೋಟ’, ‘ಚಾಣಕ್ಯ ಪ್ರಪಂಚ’, ‘ಪುಂಟಿಲ’, ‘ಆ ಊರು–ಈ ಊರು’, ‘ಅಥೆನ್ಸಿನ ಅರ್ಥವಂತ’, ‘ಲೋಕ ಶಾಕುಂತಲ’, ‘ತಲೆದಂಡ’, ‘ವಿದಿಶಾ ಪ್ರಹಸನ’, ‘ತುಘಲಕ್, ‘ಶರ್ಮಿಷ್ಠೆ’, ‘ನಮ್ಮೊಳಗೊಬ್ಬ ಗಾಂಧಿ’ ಸೇರಿದಂತೆ ನೂರುಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದರು. ಮೈಸೂರಿನ ‘ರಂಗಾಯಣ’ದ ನಿರ್ದೇಶಕರಾಗಿ ಹಾಗೂ ಬೆಂಗಳೂರಿನ NSD ಕೇಂದ್ರ ಮತ್ತು ಸಾಣೇಹಳ್ಳಿಯ ರಂಗ ತರಬೇತಿ ಶಾಲೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನದಲ್ಲೂ ಜಂಬೆ ಮುಂಚೂಣಿಯಲ್ಲಿದ್ದರು. ನೀನಾಸಂನ ಜನಸ್ಪಂದನ ಯೋಜನೆಯಡಿ ಉತ್ತರ ಕನ್ನಡದ ಮಂಚಿಕೇರಿಯಲ್ಲಿ ಸಿದ್ದಿ ಸಮುದಾಯದ ಜನರನ್ನು ಒಳಗೊಂಡು ‘ಕಪ್ಪು ಜನ, ಕೆಂಪು ನೆರಳು’ ನಾಟಕ ರೂಪಿಸಿದ್ದರು. ರಂಗಭೂಮಿ ಸಮಾಜದ ವಿವಿಧ ವರ್ಗಗಳ ಬದುಕು, ನೋವು ಹಾಗೂ ಸಂಘರ್ಷಗಳಿಗೆ ಅಭಿವ್ಯಕ್ತಿ ನೀಡುವ ಮಾಧ್ಯಮವಾಗಬೇಕು ಎಂಬ ಆಶಯಕ್ಕೆ ಒತ್ತು ನೀಡಿದ್ದರು.
ರಂಗಭೂಮಿಗೆ ನೀಡಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿದ್ದವು. ರಾಜ್ಯ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವಗಳನ್ನೂ ಪಡೆದಿದ್ದರು.

