ಶಿವಮೊಗ್ಗ: ಹೊರಗಿನಿಂದ ಔಷಧ ತರಲು ಹಾಗೂ ರಕ್ತ ಪರೀಕ್ಷೆ ಮಾಡಿಸಲು ವೈದ್ಯರು ಚೀಟಿ ಬರೆದು ಕೊಡುತ್ತಾರೆ ಎಂಬ ರೋಗಿಗಳ ಆರೋಪಕ್ಕೆ ಮಹಿಳಾ ಆಯೋಗದ ಆಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ವೈದ್ಯಾಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಅವರು ಶನಿವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ ವಾರ್ಡ್ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿದರು. ಈ ವೇಳೆ ಅಲ್ಲಿದ್ದ ರೋಗಿಗಳ ಅಹವಾಲು ಕೇಳಿ ಆಧಿಕಾರಿಗಳ ಮೇಲೆ ಕಿಡಿಕಾರಿದರು.
ಮಗುವಿನ ರಕ್ತ ಪರೀಕ್ಷೆ ರಕ್ತ ಕೊಡಲು ಮುಖ್ಯ ಕಟ್ಟಡಕ್ಕೆ ಹೊಗಬೇಕೆಂಬ ಸಮಸ್ಯೆ ಕೇಳಿ ಬರುತ್ತಿದೆ. ಇದರಿಂದ ತಾಯಿ ಮತ್ತು ಆಕೆಯ ಕುಟುಂಬಕ್ಕೂ ಸಮಸ್ಯೆಯಾಗುತ್ತಿದೆ. ತಾಯಿಯೇ ಮಗವಿನ ರಕ್ತ ಪರೀಕ್ಷೆ ಮಾಡಿಸಲು ಸ್ವತಃ ಲ್ಯಾಬ್ ಗೆ ಕೋಡಬೇಕಾದ ಸ್ಥಿತಿ ಉಂಟಾಗಿದೆ. ಈ ಬಗ್ಗೆ ಕೂಡಲೆ ಪರಿಶೀಲಿಸಬೇಕು. ಎಲ್ಲವನ್ನು ನೋಡಿಕೊಳ್ಳುವ ಸ್ಥಾನದಲ್ಲಿದ್ದಿರಾ ರೋಗಿಗಳು ಸಮಸ್ಯೆಯನ್ನು ಬಗೆಹರಿಸಿ ಎಂದು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗೆ ಕರೆ ಮಾಡಿ ತಿಳಿಸಿದರು.
ಈ ವೇಳೆ ಮಹಿಳೆಯೊಬ್ಬರು ಮಗು ಹುಟ್ಟಿದ್ದ ಕೂಡಲೆ ಆದನ್ನ ನಮಗೆ ಕೊಡಲು ದುಡ್ಡನ್ನು ಕೇಳುತ್ತಾರೆ. ಗಂಡು ಮಗು ಹುಟ್ಟಿದರು 1500, ಹೆಣ್ಣು ಮಗು ಹುಟ್ಟಿದರೆ 1000 ಕೊಡಬೇಕು. ಇಲ್ಲದಿದ್ದರೆ ಮಗು ಕೊಡಲ್ಲ ಎಂದು ಎದರಿಸುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಕೂಡಲೇ ಆ ವ್ಯಕ್ತಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಹೊರಗೆ ಹೊಳಪು-ಒಳಗೆ ಕೊಳಕು: ಮಹಿಳಾ ಜನರಲ್ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಜೊತೆಗೆ ಆಸ್ಪತ್ರೆಯಿಂದ ಸಕಾಲವಾಗಿ ಔಷಧಿ ನೀಡುವುದರ ಬಗ್ಗೆಯೂ ರೋಗಿಗಳಿಂದ ಮಾಹಿತಿ ಪಡೆದರು. ಆದರೆ ಮೂಲಭೂತ ಸೌಕರ್ಯದ ಬಗ್ಗೆ ರೋಗಿಗಳು ಆಯೋಗದ ಅಧ್ಯಕ್ಷರಲ್ಲಿ ತಮ್ಮ ಅಳಲು ತೊಡಿಕೊಂಡರು. ಶೌಚಾಲಯಲ್ಲಿ ಸರಿಯಾದ ನೀರಿನ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಕೂಡ ಇಲ್ಲ. ಕಲುಷಿತ ನೀರು ಬರುತ್ತಿದೆ. ಅದನ್ನೆ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು. ಮೂರು ದಿನಗಳ ಕಾಲ ನೀರಿಲ್ಲವೆಂದರೆ ಇಲ್ಲಿನ ರೋಗಿಗಳು ಕಾಯಿಲೆ ಗುಣವಾಗುವುದಾದರೂ ಹೇಗೆ. ಮಾಧ್ಯಮಗಳಿಗೆ ನಾವು ಉತ್ತರಿಸುವುದಾದರೂ ಏನು. ಇಂತಹ ಅವ್ಯವಸ್ಥೆ ಸಹಿಸುವುದಿಲ್ಲ. ಈ ಕುರಿತು ಆಯುಕ್ತರಿಗೆ ಪತ್ರ ಬರೆಯುತ್ತೇವೆ. ನೀವುಗಳು ಅಷ್ಟೇ ಈ ಸಮಸ್ಯೆಗಳ ಕಡೆ ಗಮನಹರಿಸಿ ಪರಿಹರಿಸಬೇಕು ಎಂದು ತಾಕೀತು ಮಾಡಿದರು.
ತಾಯಿಗೆ ಡಯಾಲಿಸ್- ಅಂಗಲಾಚಿದ ಮಗಳು:
ತಾಯಿಗೆ ಡಯಾಲಿಸ್ ಮಾಡಿಸಬೇಕು. ಆದರೆ ಮನೆಯಲ್ಲಿ ದುಡಿಯುವವರು ಇಲ್ಲ. ಸರ್ಕಾರಿ ನೌಕರಿ ಕೆಲಸ ಮಾಡುತ್ತಿದ್ದ ಅಣ್ಣ ಕೆಲವು ತಿಂಗಳ ಹಿಂದೆ ತೀರಿ ಹೋದ. ಆಗ ಇದ್ದ ಎಪಿಎಲ್ ಕಾರ್ಡ್ ನಿಂದ ಈಗ ಅಮ್ಮನಿಗೆ ಡಯಾಲಿಸಿಸ್ ಮಾಡಿಸಲು ತುಂಬಾ ಹಣ ಬೇಕಾಗುತ್ತದೆ ಎಂದು ಯುವತಿಯೊಬ್ಬಳು ಅಳಲು ತೋಡಿಕೊಂಡರು. ಕೂಡಲೇ ನಾಗಲಕ್ಷ್ಮಿ ಚೌಧರಿ ಅವರು ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ಈ ಸಮಸ್ಯೆಯ ಕುರಿತು ವಿವರಿಸಿ ಎಪಿಎಲ್ ಇರುವ ಕಾರ್ಡ್ ಬಿಪಿಎಲ್ ಮಾಡಿಸಿ ಕೊಡಿ ಇದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದ ತಿಳಿಸಿದರು.
ಪಿಜಿ-ರೈಲ್ವೆ ನಿಲ್ದಾಣದಲ್ಲೂ ಮಹಿಳೆಯರಿಗೆ ರಕ್ಷಣೆ ಇರಬೇಕು: ಪ್ರತಿಯೊಂದು ಇಲಾಖೆಯಲ್ಲಿ ಮಹಿಳಾ ಆಂತರಿಕ ದೂರು ಸಮಿತಿ ಇಟ್ಟುಕೊಳ್ಳಬೇಕು. ಆದರೆ ಅದು ಸರಿಯಾಗಿ ನಡೆಯುತ್ತಿಲ್ಲ. ಹಿರಿಯ ಅಧಿಕಾರಿಗಳ ಮೇಲೆ ದೂರು ಕೊಡಲು ಮಹಿಳಾ ನೌಕರರ ಹಿಂಜರಿಯುತ್ತಿದ್ದಾರೆ. ಇದು ಇಲ್ಲಿಗೆ ಅಂತ್ಯವಾಗಬೇಕು ಎಂದರು.
ಶಾಲಾ- ಕಾಲೇಜಿನ ಸುತ್ತಮುತ್ತ ಮಾತ್ರವಲ್ಲದೆ ಲೇಡಿಸ್ ಪಿಜಿ, ರೈಲ್ವೆ ಸ್ಟೇಷನ್‌ಗಳಲ್ಲೂ ಮಹಿಳೆಯರ ರಕ್ಷಣೆಗೆ ಪೊಲೀಸ್ ಗಸ್ತು ವಾಹನ ಇರಬೇಕು ಎಂದರು.
ಈ ವೇಳೆ ಅಧಿಕಾರಿಗಳು ಮಹಿಳೆಯರಿಗೆ ಸಂಬಂಧಪಟ್ಟಂತೆ ಕೇಸ್ ಮಾಹಿತಿ ನೀಡಿದರು. 1 ತಿಂಗಳಲ್ಲಿ 15 ರಿಂದ 20 ಕೇಸ್ ದಾಖಲಾಗುತ್ತದೆ. ಮಹಿಳೆಯ ಎಲ್ಲಾ ಪ್ರಕರಣ ಸಂಬಂಧಪಟ್ಟಂತೆ ಒಟ್ಟು 113 ಎಲ್ಲ ಕೇಸ್ ದಾಖಲಾಗಿದೆ ಎಂದರು.
ಮನೆ ಲೀಸ್ ಹಾಕಿಸಿಕೊಡುವುದಾಗಿ ಅಂಗವಿಕಲರಿಗೆ ಮೋಸ: ಸಂಬಂಧಿಕರು ಹಣವನ್ನು ಪಡೆದು 4 ಲಕ್ಷ ಬೋಗ್ಯಕ್ಕೆ ಮನೆಯನ್ನು ಪಡೆದಿದ್ದೆ. ಆದರೆ ಆ ಭೋಗ್ಯದ ಮನೆ ಈಗಾಗಲೇ ಬ್ಯಾಂಕ್‌ನಲ್ಲಿ ಮತ್ತು ಪೈನಾನ್ಸ್ ನಲ್ಲಿ ಅಡವಿಟ್ಟು ಹಾಗೂ ಬೇರೆಯರಿಗೆ ಮಾರಾಟ ಮಾಡಿದ್ದಾರೆ. ಭೋಗ್ಯಕ್ಕೆ ಪಡೆಯುವಾಗ ನಮಗೆ ತಿಳಿದಿರಲಿಲ್ಲ. ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದರು. ನಮಗೆ ತಿಳಿಯದಂತೆ ಬ್ಯಾಂಕ್ ನವರು ಮನೆಗೆ ಬಂದು ನೋಟಿಸ್ ಅಂಟಿದ್ದಾರೆ. ಇದನ್ನು ಬಗೆಹರಿಸಿಕೊಡಿ ಎಂದು ಅಂಗವಿಕಲರಾದ ಛಾಯಮ್ಮ ಅಹವಾಲು ತೋಡಿಕೊಂಡು. ಇದಕ್ಕೆ ಸಂಬಂಧಪಟ್ಟಂತೆ ಕಡೂರಿನ ಪೋಲಿಸರಿಗೆ ಕರೆ ಮಾಡಿ ನ್ಯಾಯ ಕೊಡಿಸುವುದಾಗಿ ಅಧ್ಯಕ್ಷರು ತಿಳಿಸಿದರು.
ಗುತ್ತಿಗೆ ನೌಕರರಿಗೆ ಸಂಬಳ ನೀಡಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವವ ಗುತ್ತಿಗೆ ನೌಕರರಿಗೆ ಹಲವು ತಿಂಗಳಿಂದ ವೇತನವನ್ನು ಬ್ಯಾಂಕ್ ಖಾತೆಯಿಂದ ಜಮಾವಾಗದೆ ಕೈಯಲ್ಲಿ ನೀಡುತ್ತಿದ್ದಾರೆ ಎಂಬ ದೂರು ಬಂದಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು. ಬ್ಯಾಂಕ್ ನಿಂದ ನೇರವಾಗಿ ಇಎಸ್‌ಐ, ಪಿಎಫ್ ಕಡಿತ ಮಾಡಿ ವೇತನವನ್ನು ಅವರ ಖಾತೆ ಜಮಾ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭೇಟಿ ವೇಳೆ ಸಿಮ್ಸ್ ನಿರ್ದೇಶಕ ಡಾ.ರಮೇಶ್ ಬಾಬು, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಡಿಹೆಚ್ ಓ ಡಾ.ನಟರಾಜ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶುಶ್ರೂಣಕಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

