HomeKarnatakaವಸತಿ ನಿಲಯ, ಶಾಲೆಗಳಿಗೆ ಅನಿರೀಕ್ಷಿತ ಭೇಟಿ, ಪರಿಶೀಲನೆ ಕಡ್ಡಾಯ: ಅಧಿಕಾರಿಗಳಿಗೆ ಸಚಿವ ಮುನಿಯಪ್ಪ ತಾಕೀತು

ವಸತಿ ನಿಲಯ, ಶಾಲೆಗಳಿಗೆ ಅನಿರೀಕ್ಷಿತ ಭೇಟಿ, ಪರಿಶೀಲನೆ ಕಡ್ಡಾಯ: ಅಧಿಕಾರಿಗಳಿಗೆ ಸಚಿವ ಮುನಿಯಪ್ಪ ತಾಕೀತು

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗೆ ಶನಿವಾರ ಸಮಾಜ ಕಲ್ಯಾಣ ಸಚಿವ ಕೆ.ಹೆಚ್.ಮುನಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.    

ಈ ವೇಳೆ ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಕಿವಿಮಾತು ಹೇಳಿದ ಸಚಿವರು, ವಸತಿ ಶಾಲೆಯಲ್ಲಿ ಪಿ.ಯು. ಶಿಕ್ಷಣ ಆರಂಭಿಸುವ ಭರವಸೆಯನ್ನು ನೀಡಿದರು.

“ಬಡತನದ ಹಿನ್ನೆಲೆ ಹೊಂದಿರುವ ಮಕ್ಕಳೇ‌ ಇಲಾಖೆಯ ವಸತಿ ಶಾಲೆಯಲ್ಲಿ ಓದುವುದು. ನಿಮ್ಮ ತಂದೆ ತಾಯಂದಿರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಆರ್ಥಿಕ ಚೈತನ್ಯವಿಲ್ಲ. ಎಸ್.ಎಸ್.ಎಲ್.ಸಿ‌ ಹಾಗೂ ಪಿಯುಸಿಯಲ್ಲಿ ಅತ್ಯುನ್ನತ ‌ಶ್ರೇಣಿಯಲ್ಲಿ ಪಾಸಾಗಿ, ನೀಟ್ ಹಾಗೂ ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ವೈದ್ಯಕೀಯ ಹಾಗೂ ಇಂಜಿನಿಯರ್ ಸೀಟನ್ನು ಪಡೆಯುವ ಲಕ್ಷ್ಯ ಹೊಂದಬೇಕು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಎದುರಿಸಿ  ಐ.ಎ.ಎಸ್, ಐ.ಪಿ.ಎಸ್ ಹಾಗೂ ಕೆ.ಎ.ಎಸ್ ಅಧಿಕಾರಿಗಳಾಗಿ ಸೇವೆ ಮಾಡುವ ಕನಸುಗಳನ್ನು ಕಾಣುವಂತೆ” ವಿದ್ಯಾರ್ಥಿನಿಯರಿಗೆ ಸಚಿವ ಕೆ.ಹೆಚ್. ಮುನಿಯಪ್ಪ ಪ್ರೇರಣೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಸತಿ ಶಾಲೆ ಹಾಗೂ ನಿಲಯಗಳಿಗೆ ಭೇಟಿ ನೀಡಿ ವರದಿ ನೀಡಲು ತಾಕೀತು:

ಅಧಿಕಾರಿಗಳು ಕಚೇರಿ ಕೆಲಸಗಳಿಗೆ ಸೀಮಿತವಾಗಬಾರದು. ಪ್ರತಿನಿತ್ಯ ಒಂದು ವಸತಿಶಾಲೆ ಅಥವಾ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನಾ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಅವರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ತಾಕೀತು ಮಾಡಿದರು.

ಈ ಕುರಿತು ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗುವುದು. ವಸತಿಶಾಲೆ ಹಾಗೂ ನಿಲಯಗಳಲ್ಲಿ ಅಧಿಕಾರಿ ಪರಿಶೀಲಿಸಬೇಕಾದ ತಪಸೀಲು ಪಟ್ಟಿಯನ್ನು ಸಹ ಸತ್ತೋಲೆಯೊಂದಿಗೆ ನೀಡಲಾಗುವುದು. ವಸತಿ ನಿಲಯ ಅಥವಾ ಶಾಲೆ ಮುಖ್ಯಸ್ಥರಿಗೆ ಯಾವುದೇ ಸುಳಿವು ನೀಡದೆ, ಅನಿರೀಕ್ಷಿತವಾಗಿ ಭೇಟಿ ನೀಡಬೇಕು. ಕಡ್ಡಾಯವಾಗಿ ವಾರಕ್ಕೆ ಒಂದು ದಿನ ಜಿಲ್ಲಾಧಿಕಾರಿ ಹಾಗೂ ಸಿಇಓಗಳು ಸಹ ಪರಿಶೀಲನೆ ನಡೆಸಬೇಕು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಸೂಚಿಸಿದರು.

ಕುಡಿಯುವ ನೀರು ಸರಬರಾಜಿಗೆ ಅನುದಾನ:

ಐಮಂಗಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ವಸತಿ ಶಾಲೆ ನೀರು ಸರಬರಾಜು ಮಾಡಲು ವಿದ್ಯಾರ್ಥಿನಿಯರು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ.ಹೆಚ್.ಮುನಿಯಪ್ಪನವರು ಪೈಪ್ ಲೈನ್ ಕಾಮಗಾರಿ ಯೋಜನಾ ವರದಿಯನ್ನು ಸಿದ್ದಪಡಿಸುವಂತೆ ಸಿಇಓ‌ಗೆ ಸೂಚಿಸಿದರು. ಕಾಮಗಾರಿ ತಗಲು ವೆಚ್ಚಕ್ಕೆ ಇಲಾಖೆಯಿಂದ ಅನುದಾನ ನೀಡುವುದಾಗಿ ತಿಳಿಸಿದರು. ಇದೇ ವೇಳೆ ವಸತಿ ಶಾಲೆಯ ಬೋಧನಾ ಕೊಠಡಿ, ಪ್ರಯೋಗಾಲಯ, ಡಾರ್ಮೆಂಡರ್, ಭೋಜನಾಲಯಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.

ಸೊಪ್ಪು ತರಕಾರಿ ತೊಳೆದು ಬಳಸಲು ಸಲಹೆ:

ವಸತಿ ಶಾಲೆಯ ಅಡುಗೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಸಚಿವ ಕೆ.ಹೆಚ್.ಮುನಿಯಪ್ಪ, ಸೊಪ್ಪು ತರಕಾರಿಗಳನ್ನು ತಪ್ಪದೇ ನೀರಿನಲ್ಲಿ ತೊಳೆದು ಬಳಸುವಂತೆ ಸಲಹೆ ನೀಡಿದರು. ಊಟದ ಮೆನುವಿನ ಆಧರಿಸಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು. ಮೊಟ್ಟೆ, ಬಾಳೆಹಣ್ಣು ವಿತರಿಸಬೇಕು ಎಂದರು.

ಈ ವೇಳೆ ಬಹಳ ವರ್ಷಗಳಿಂದ ವಸತಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಖಾಯಂ ಗೊಳಿಸಲು ಅಡುಗೆ ಸಿಬ್ಬಂದಿ ಸಚಿವರಲ್ಲಿ ಮನವಿ ಮಾಡಿದರು.

ಇಲಾಖೆಯಲ್ಲಿನ ಖಾಯಂ ಅಡುಗೆ ಸಿಬ್ಬಂದಿಗೆ ಸೇವಾ ಹಿರಿತನದ ಆಧಾರದಲ್ಲಿ ಬಡ್ತಿ ನೀಡಲಾಗುತ್ತದೆ. ನಂತರ ಭರ್ತಿ ಮಾಡುವ ಹುದ್ದೆಗಳಲ್ಲಿ ಕ್ರೈಸ್ ಅಡಿ ಈಗಾಗಲೇ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪಿ.ಯು.ಶಿಕ್ಷಣ ಆರಂಭಕ್ಕೆ ಸಿದ್ದತೆಗೆ ಸೂಚನೆ:

ಸದ್ಯ ಇರುವ ವಸತಿ ಶಾಲೆಯ ಕಟ್ಟದ ಮೇಲ್ಬಾಗದಲ್ಲಿಯೇ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಿ ಪಿ.ಯು. ಶಿಕ್ಷಣ ಆರಂಭಿಸಲು ಯೋಜನೆಯೊಂದನ್ನು ಸಿದ್ದಪಿಡಿಸಿ ಇಲಾಖೆ ಪ್ರಸ್ತಾವನೆ ಸಲ್ಲಿಸುವಂತೆ ವಸತಿ ಶಾಲೆ ಪ್ರಾಂಶುಪಾಲರಿಗೆ ಸಚಿವ.ಕೆ.ಹೆಚ್.ಮುನಿಯಪ್ಪ ಸೂಚಿಸಿದರು. ವಸತಿ ಶಾಲೆಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಅವರು, ಎಲ್ಲಾ ವಿದ್ಯಾರ್ಥಿಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ಮಾಡುವ ಗುರಿಯನ್ನು ಪ್ರಾಂಶುಪಾಲರಿಗೆ ನೀಡಿ, ಗಣ್ಯರ ಭೇಟಿ ಪುಸ್ತಕದಲ್ಲಿ ಸಹಿ ಮಾಡಿದರು. ಭೇಟಿ ನೆನಪಿಗಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಚಿವರೊಂದಿಗೆ ಪೋಟೋ ತೆಗೆಸಿಕೊಂಡರು.

ಈ ವೇಳೆ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ವಸತಿ ಶಾಲೆ ಪ್ರಾಂಶುಪಾಲ ಆರ್.ರಮೇಶ್ ಸೇರಿದಂತೆ ಮತ್ತಿತರರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular