ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಭೀಕರ ಅವಘಡ ಸಂಭವಿಸಿದೆ. ದೇಶದ ಪಶ್ಚಿಮ ಭಾಗದಲ್ಲಿರುವ ಚಿನ್ನದ ಗಣಿಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ ಕನಿಷ್ಠ 30 ಕಾರ್ಮಿಕರು ಮೃತಪಟ್ಟಿದ್ದಾರೆ.
ಮಣ್ಣಿನ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿಕೊಂಡಿರುವುದರಿಂದ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನಾನಾ-ಮಂಬೆರೆ ಪ್ರಿಫೆಕ್ಚರ್ ವ್ಯಾಪ್ತಿಯ ಅಬ್ಬಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ತಾಂತ್ರಿಕ ಜ್ಞಾನವಿಲ್ಲದೆ ಸಾಂಪ್ರದಾಯಿಕ ವಿಧಾನದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಗಣಿ ಏಕಾಏಕಿ ಕುಸಿದಿದೆ ಎಂದು ಅಪಘಾತದಿಂದ ಪಾರಾದ ಫ್ಲೋರಿಯನ್ ಗಾಗುಂಡೆ ಎಂಬ ಕಾರ್ಮಿಕರು ತಿಳಿಸಿದ್ದಾರೆ.
ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಅವರು ಜೀವಂತವಾಗಿ ಹೊರಬರುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮೃತದೇಹಗಳ ಹೊರತೆಗೆಯುವಿಕೆ
ಗಣಿ ಕುಸಿದ ಸ್ಥಳದಲ್ಲಿ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 30 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡಿರುವ ಇತರ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ-ಪ್ರಿಫೆಕ್ಚರ್ ಉಪ ಮೇಯರ್ ಸುಲೇಮಾನ್ ಬಿ ತಿಳಿಸಿದ್ದಾರೆ.
ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಸ್ವಯಂಸೇವಾ ಸಂಸ್ಥೆಗಳು ಹಾಗೂ ದಾನಿಗಳು ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ. ಗಣಿ ಪ್ರದೇಶದಲ್ಲಿ ಕೆಸರು ತುಂಬಿದ ಗುಂಡಿಗಳಿಂದ ಮೃತದೇಹಗಳನ್ನು ಹೊರತೆಗೆಯುತ್ತಿರುವ ದೃಶ್ಯಗಳು ಹರಿದಾಡುತ್ತಿವೆ.
ಈ ದುರಂತಕ್ಕೆ ಸಂಬಂಧಿಸಿದಂತೆ ಸರ್ಕಾರದ ವಕ್ತಾರ ಎವರಿಸ್ಟ್ ಎನ್‌ಗಮನಾ ಪ್ರತಿಕ್ರಿಯಿಸಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಸಣ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಗಣಿಗಾರಿಕೆ ನಡೆಸುವುದರಿಂದ ಇಂತಹ ಮಾರಣಾಂತಿಕ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿವೆ.

