ಹಬ್ಬದ ದಿನಗಳಲ್ಲಿ ವೈವಿಧ್ಯಮಯ ತಿನಿಸುಗಳನ್ನು ತಯಾರಿಸುವುದು ಪ್ರತಿಯೊಬ್ಬರ ಮನೆಗಳಲ್ಲೂ ಸಾಮಾನ್ಯ. ಮುಂಬರುವ ದೀಪಾವಳಿ ಹಬ್ಬಕ್ಕೆ ಆರೋಗ್ಯಕರ ಹಾಗೂ ರುಚಿಕರವಾದ ತಿಂಡಿ ಮಾಡಲು ಬಯಸುವವರು ರಾಗಿ ಅಥವಾ ನಚನಿ ಶಂಕರಪಾಳಿಯನ್ನು ಪ್ರಯತ್ನಿಸಬಹುದು. ರಾಗಿ ಹಿಟ್ಟಿನಿಂದ ಮಾಡಲಾಗುವ ಈ ಶಂಕರಪಾಳಿ ಗರಿಗರಿಯಾಗಿರುವುದಲ್ಲದೆ, ದೇಹಕ್ಕೂ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಮನೆಯಲ್ಲಿಯೇ ಅತ್ಯಂತ ಸರಳವಾಗಿ ಈ ತಿನಿಸನ್ನು ಸಿದ್ಧಪಡಿಸುವ ವಿಧಾನ ಇಲ್ಲಿದೆ.
ಅಗತ್ಯವಿರುವ ಸಾಮಗ್ರಿಗಳು
ರಾಗಿ ಹಿಟ್ಟು ಅಥವಾ ನಚನಿ ಹಿಟ್ಟು 1 ಕೆಜಿ, ಹಾಲು 450 ಎಂಎಲ್, ವನಸ್ಪತಿ ತುಪ್ಪ 300 ಗ್ರಾಂ, ಸಕ್ಕರೆ ಪುಡಿ 300 ಗ್ರಾಂ ಹಾಗೂ ಕರಿಯಲು ಅಗತ್ಯವಿರುವಷ್ಟು ಎಣ್ಣೆ.
ತಯಾರಿಸುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ವನಸ್ಪತಿ ತುಪ್ಪವನ್ನು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ಮತ್ತೊಂದೆಡೆ ಅಗಲವಾದ ತಟ್ಟೆಯಲ್ಲಿ ರಾಗಿ ಹಿಟ್ಟು ಮತ್ತು ಸಕ್ಕರೆ ಪುಡಿಯನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಕಾಯಿಸಿದ ಬಿಸಿ ತುಪ್ಪವನ್ನು ಈ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ. ಬಳಿಕ ಹಾಲನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ.
ಹೀಗೆ ಸಿದ್ಧಪಡಿಸಿದ ಹಿಟ್ಟನ್ನು ಸುಮಾರು ಒಂದು ಗಂಟೆಯ ಕಾಲ ಮುಚ್ಚಿಟ್ಟು ನೆನೆಯಲು ಬಿಡಿ. ಒಂದು ಗಂಟೆಯ ನಂತರ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿಕೊಂಡು, ಚಪಾತಿಯಂತೆ ದಪ್ಪವಾಗಿ ಲಟ್ಟಿಸಿಕೊಳ್ಳಿ. ಬಳಿಕ ಅದನ್ನು ಶಂಕರಪಾಳಿಯ ಶೇಪ್‌ನಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಶಂಕರಪಾಳಿಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯಿಂದ ತೆಗೆದ ನಂತರ ಹೆಚ್ಚುವರಿ ಎಣ್ಣೆ ಬಸಿಯಲು ಟಿಶ್ಯೂ ಪೇಪರ್ ಮೇಲೆ ಹಾಕಿ. ಶಂಕರಪಾಳಿ ಸಂಪೂರ್ಣವಾಗಿ ಆರಿದ ಮೇಲೆ ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿಟ್ಟರೆ ಹಲವು ದಿನಗಳ ಕಾಲ ಗರಿಗರಿಯಾಗಿ ಇರುತ್ತದೆ.

