ಆದಾಯ ತೆರಿಗೆ ವಿವರ (ITR) ಅನ್ನು ಸಮಯಕ್ಕೆ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರಿಗೆ ವಿಧಿಸಲಾಗಿದ್ದ ₹3,74,072 ದಂಡವನ್ನು ದೆಹಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ರದ್ದುಪಡಿಸಿದೆ.
ಸಮಯಕ್ಕೆ ITR ಸಲ್ಲಿಸದಿರುವುದು ಮತ್ತು ಆದಾಯವನ್ನು ಕಡಿಮೆ ತೋರಿಸುವುದು ಎರಡು ಪ್ರತ್ಯೇಕ ವಿಚಾರಗಳು ಎಂದು ಸ್ಪಷ್ಟಪಡಿಸಿರುವ ನ್ಯಾಯಮಂಡಳಿ ಈ ಮಹತ್ವದ ತೀರ್ಪು ನೀಡಿದೆ.
ಅಸಲಿಗೆ ಏನಾಗಿತ್ತು?
ಉದ್ಯೋಗಿ ಪ್ರವೇಶ್ ಅಗರ್ವಾಲ್ ಅವರ ಪ್ರಕರಣವನ್ನು ಗಮನಿಸಿದರೆ, ಅವರು 2019-20ನೇ ಮೌಲ್ಯಮಾಪನ ವರ್ಷಕ್ಕೆ ₹30,22,900 ವಾರ್ಷಿಕ ವೇತನ ಪಡೆಯುತ್ತಿದ್ದರು. ಆ ವರ್ಷ ಅವರು ಉದ್ಯೋಗ ಬದಲಾಯಿಸಿದ್ದರಿಂದ ಕಂಪನಿಗಳಿಂದ ಸಮಯಕ್ಕೆ Form-16 ಸಿಗಲಿಲ್ಲ.
ಅವರ ಎರಡು ಕಂಪನಿಗಳು ವೇತನದಿಂದ TDS ಕಡಿತಗೊಳಿಸಿದ್ದವು. ಈ ವಿವರಗಳು ಅವರ Form 26ASನಲ್ಲೂ ಸ್ಪಷ್ಟವಾಗಿ ದಾಖಲಾಗಿದ್ದವು. ಈಗಾಗಲೇ ತೆರಿಗೆ TDS ರೂಪದಲ್ಲಿ ಸರ್ಕಾರಕ್ಕೆ ಪಾವತಿಯಾಗಿರುವುದರಿಂದ ಅವರು ಸಮಯಕ್ಕೆ ITR ಸಲ್ಲಿಸಲಿಲ್ಲ.
ಐಟಿ ಇಲಾಖೆಯಿಂದ ನೋಟಿಸ್, ದಂಡ
₹30 ಲಕ್ಷಕ್ಕೂ ಹೆಚ್ಚು ಆದಾಯವಿದ್ದರೂ ITR ಸಲ್ಲಿಸದಿರುವುದನ್ನು ಆದಾಯ ತೆರಿಗೆ ಇಲಾಖೆ ಗಮನಿಸಿತು. ಬಳಿಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148 ಅಡಿಯಲ್ಲಿ ಅವರಿಗೆ ಮರುಮೌಲ್ಯಮಾಪನ ನೋಟಿಸ್ ನೀಡಲಾಯಿತು.
ನೋಟಿಸ್ ಬಂದ ಕೂಡಲೇ ಅವರು ತಮ್ಮ ಸಂಪೂರ್ಣ ₹30.22 ಲಕ್ಷ ಆದಾಯದ ವಿವರಗಳನ್ನು ಬಹಿರಂಗಪಡಿಸಿ ITR ಸಲ್ಲಿಸಿದರು.
ಅಸೆಸ್‌ಮೆಂಟ್ ಅಧಿಕಾರಿ (AO) ಅವರು ಸಲ್ಲಿಸಿದ ಆದಾಯದಲ್ಲಿ ಯಾವುದೇ ಬದಲಾವಣೆ ಮಾಡದೆ ಸಂಪೂರ್ಣ ಮೊತ್ತವನ್ನು ಅಂಗೀಕರಿಸಿದರು. ಆದರೆ ನಿಗದಿತ ಗಡುವಿನೊಳಗೆ ITR ಸಲ್ಲಿಸದ ಕಾರಣ, ಇದನ್ನು ‘ಆದಾಯವನ್ನು ಕಡಿಮೆ ತೋರಿಸಿರುವುದು’ ಎಂದು ಪರಿಗಣಿಸಿ ಸೆಕ್ಷನ್ 270A ಅಡಿಯಲ್ಲಿ ₹3.74 ಲಕ್ಷ ದಂಡ ವಿಧಿಸಿದರು.
ITAT ನೀಡಿದ ತೀರ್ಪು ಏನು?
ಐಟಿ ಇಲಾಖೆ ವಿಧಿಸಿದ್ದ ದಂಡವನ್ನು ಪ್ರಶ್ನಿಸಿ ಉದ್ಯೋಗಿ ದೆಹಲಿ ITAT ಮೊರೆಹೋದರು. ಪ್ರಕರಣವನ್ನು ಪರಿಶೀಲಿಸಿದ ನ್ಯಾಯಮಂಡಳಿ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ದಂಡವನ್ನು ರದ್ದುಪಡಿಸಿತು.
-
ಆದಾಯ ಮುಚ್ಚಿಟ್ಟಿಲ್ಲ: ನೋಟಿಸ್ ಬಂದ ಬಳಿಕ ಉದ್ಯೋಗಿ ಬಹಿರಂಗಪಡಿಸಿದ ಸಂಪೂರ್ಣ ಆದಾಯವನ್ನು ಐಟಿ ಇಲಾಖೆ ಯಾವುದೇ ಕಡಿತವಿಲ್ಲದೆ ಅಂಗೀಕರಿಸಿದೆ. ಹೀಗಾಗಿ ಅವರು ನಿಜವಾದ ಆದಾಯಕ್ಕಿಂತ ಕಡಿಮೆ ಆದಾಯ ತೋರಿಸಿರಲಿಲ್ಲ.
-
TDS ಈಗಾಗಲೇ ಪಾವತಿಯಾಗಿದೆ: ವೇತನದಿಂದ ಕಡಿತ ಮಾಡಲಾದ ತೆರಿಗೆ ಈಗಾಗಲೇ ಸರ್ಕಾರಕ್ಕೆ ಜಮೆಯಾಗಿರುವುದು Form 26AS ಮೂಲಕ ದೃಢಪಟ್ಟಿದೆ.
-
ವಿಧಾನಾತ್ಮಕ ತಪ್ಪು ಮಾತ್ರ: TDS ಕಡಿತಗೊಂಡಿದ್ದರೂ ITR ಸಲ್ಲಿಸದಿರುವುದು ನಿಯಮ ಪಾಲನೆಯಲ್ಲಿ ಉಂಟಾದ ತಪ್ಪಾಗಬಹುದು. ಆದರೆ ಅದನ್ನು ‘ಆದಾಯವನ್ನು ಮರೆಮಾಚುವುದು’ ಅಥವಾ ‘ಆದಾಯವನ್ನು ಕಡಿಮೆ ತೋರಿಸುವುದು’ ಎಂದು ಪರಿಗಣಿಸಲಾಗುವುದಿಲ್ಲ ಎಂದು ITAT ಸ್ಪಷ್ಟಪಡಿಸಿದೆ.
ತೆರಿಗೆದಾರರು ತಿಳಿದುಕೊಳ್ಳಬೇಕಾದದ್ದು
ವೇತನದಿಂದ TDS ಕಡಿತಗೊಂಡಿದ್ದರೂ ಪ್ರತಿಯೊಬ್ಬರೂ ತಮ್ಮ ITR ಅನ್ನು ಸಲ್ಲಿಸುವುದು ಕಾನೂನುಬದ್ಧವಾಗಿ ಅಗತ್ಯವಾಗಬಹುದು. ಆದರೆ ತೆರಿಗೆದಾರರು ತಮ್ಮ ಸಂಪೂರ್ಣ ಆದಾಯದ ವಿವರಗಳನ್ನು ಬಹಿರಂಗಪಡಿಸಿ, ಈಗಾಗಲೇ TDS ಪಾವತಿಯಾಗಿರುವುದನ್ನು ತೋರಿಸಿದರೆ, ಕೇವಲ ITR ತಡವಾಗಿ ಸಲ್ಲಿಸಿದ ಕಾರಣಕ್ಕೆ ಸೆಕ್ಷನ್ 270A ಅಡಿಯಲ್ಲಿ ಭಾರಿ ದಂಡ ವಿಧಿಸುವುದು ಸರಿಯಲ್ಲ ಎಂದು ಈ ತೀರ್ಪು ಸ್ಪಷ್ಟಪಡಿಸಿದೆ.

