ಮಂಗಳೂರು: ಬಟ್ಟೆ ಒಣಗಿಸಲು ಹೋದಾಗ ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಕೂಕಿನ ಪಾಲಡ್ಕ ಗ್ರಾಮ ಪಂಚಾಯಿತಿಯ ವರ್ಣಬೆಟ್ಟು ಎಂಬಲ್ಲಿ ಈ ಘಟನೆ ನಡೆದಿದೆ. ತಾಯಿ ಮರ್ಸಿ ಮಸ್ಕರೇನಸ್ (45), ಪುತ್ರ ಶೋನ್ ಮಸ್ಕರೇನಸ್ (18) ಮೃತ ದುರ್ದೈವಿಗಳು.
ಇಂದು ಬೆಳಿಗ್ಗೆ 7 ರಿಂದ 8 ಗಂಟೆ ನಡುವೆ ಬಟ್ಟೆ ಒಣಗಿಸುವಾಗ ಈ ದುರಂತ ಸಂಭವಿಸಿದೆ. ಬಟ್ಟೆ ಒಣಗಲು ಹಾಕುವಾಗ ಬಟ್ಟೆ ತಂತಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ್ದು, ಮಗ ಕರೆಂಟ್ ಶಾಕ್ ಹೊಡೆದು ಪರದಾಡುತ್ತಿದ್ದ. ಆತನನ್ನು ರಕ್ಷಿಸಲು ಹೋದ ತಾಯಿಗೂ ಕರೆಂಟ್ ಶಾಕ್ ಹೊಡೆದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶೋನ್ ಮಸ್ಕರೇನಸ್ ಮೂಡುಬಿದಿರೆ ಹೋಲಿ ರೋಸರಿ ವಿದ್ಯಾರ್ಥಿಯಾಗಿದ್ದ. ಬಟ್ಟೆ ಒಣಗಿಸುವಾಗ ವಿದ್ಯುತ್ ಅವಘಡ ಸಂಭವಿಸಿ ತಾಯಿ-ಮಗ ಇಬ್ಬರೂ ದಾರುಣ ಆಂತ್ಯಕಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ತವ್ಯನಿರತ ಸಂಚಾರಿ ಪೊಲೀಸ್ ಮೇಲೆ ಕಾರು ಹತ್ತಿಸಿದ ಪ್ರಕರಣ: ಚಾಲಕನ ಮೇಲಿನ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನ ವಿರುದ್ಧದ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಐದು ವರ್ಷದ ಹಿಂದೆ ಬೆಂಗಳೂರು ನಗರದಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರು ಚಾಲಕನ ವರ್ತನೆಗೆ ಕಿಡಿ ಕಾರಿರುವ ಹೈಕೋರ್ಟ್ ಆತನ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಲು ನಿರಾಕರಿಸಿದೆ.
ತನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಕೋರಿ ನಾಗರಬಾವಿಯ ರಾಮಾಂಜಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.
“ಕಾನೂನುಬದ್ಧವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಕಾರು ಚಲಾಯಿಸಿ ದುರಹಂಕಾರ ಪ್ರದರ್ಶಿಸಿರುವ ಆರೋಪಿಯ ನಡೆಗೆ ರಿಯಾಯಿತಿ ತೋರಲು ಸಾಧ್ಯವೇ ಇಲ್ಲ” ಎಂದು ಕಟುಶಬ್ದಗಳಲ್ಲಿ ಹೇಳಿದೆ.
‘ಕಾರನ್ನು ಬೆದರಿಕೆ ಅಥವಾ ಹಿಂಸೆಯ ಸಾಧನವಾಗಿ ಪರಿವರ್ತಿಸಲು ಅನುಮತಿ ನೀಡಲಾಗುವುದಿಲ್ಲ. ಪ್ರಕರಣದಲ್ಲಿನ ಆರೋಪಗಳನ್ನು ಪರೀಕ್ಷಿಸದೆಯೇ ವಿಚಾರಣೆ ರದ್ದುಗೊಳಿಸಿದರೆ ಕಾನೂನಿನ ನಿಯಮವು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ’ ಎಂದು ನ್ಯಾಯಾಲಯ ತಿಳಿಸಿದೆ.
ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಅರ್ಜಿದಾರ ರಾಮಾಂಜಲು 2021ರ ಅ.23ರಂದು ಹುಂಡೈ ಕ್ರೆಟಾ ಕಾರನ್ನು ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಾಯಿಸಿಕೊಂಡು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಡ್ರಂಕ್ ಡ್ರೈವ್ ಪತ್ತೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು.
ಅದೇ ಮಾರ್ಗವಾಗಿ ಬಂದ ರಾಮಾಂಜಲು ಅವರ ಕಾರನ್ನು ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಹೆಡ್ ಕಾನ್ಸ್‌ಟೆಬಲ್‌ವೊಬ್ಬರು ತಡೆಯಲು ಮುಂದಾದರು. ಆದರೆ, ಅವರು ತಮ್ಮ ಕಾರನ್ನು ನಿಲ್ಲಿಸದೆ ಸ್ಥಳದಿಂದ ರಭಸವಾಗಿ ಮುಂದೆ ಸಾಗುವ ಮೂಲಕ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೆಡ್ ಕಾನ್ಸ್‌ಟೆಬಲ್ , ಅಧಿಕೃತ ಕರ್ತವ್ಯ ನಿರ್ವಹಿಸುವಾಗ ವಾಹನವನ್ನು ಅಡ್ಡಗಟ್ಟಿದ್ದೆ. ಆದರೆ, ರಾಮಾಂಜಲು ವಾಹನವನ್ನು ನಿಲ್ಲಿಸುವ ಬದಲು, ನನ್ನ ಮೈಮೇಲೆ ಹರಿಸಿದ್ದರಿಂದ ತೊಡೆಗಳು ಹಾಗೂ ಪಾದಗಳಿಗೆ ಗಾಯಗಳಾಗಿವೆ. ಕುಡಿದು ವಾಹನ ಚಲಾಯಿಸುವ ಪತ್ತೆ ಯಂತ್ರಕ್ಕೆ (ಡಿಡಿ ಯಂತ್ರ) ಹಾನಿ ಉಂಟು ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.
ಆ ದೂರಿನಂತೆ ಎಚ್‌ಎಎಲ್ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ-1860 ರ ಕಲಂ 353, 307, 279, 427 ಮತ್ತು 506ರ ಅಡಿಯಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಹಾಗಾಗಿ ಅರ್ಜಿದಾರರು ಪ್ರಕರಣ ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ರಾಮಾಂಜಲು ವಿರುದ್ಧದ ಕೇಸ್ ರದ್ದುಗೊಳಿಸಲು ನಿರಾಕರಿಸಿದ್ದು, ವಿಚಾರಣೆ ಮುಂದುವರೆಯಲಿದೆ.

