ಹುಬ್ಬಳ್ಳಿ: ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜನೆ ಹಾಗೂ ದ್ವೇಷ ಭಾಷಣ ಆರೋಪದಡಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಸೇರಿದಂತೆ ಆರು ಜನರ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಶ್ರೀರಾಮ ಸೇನೆಯ ದುರ್ಗಾ ಸೇನೆ ವತಿಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ತ್ರಿಶೂಲ ದೀಕ್ಷೆ ಕಾರ್ಯಕ್ರಮದಲ್ಲಿ ಕಬ್ಬಿಣದ ಆಯುಧ ಪ್ರದರ್ಶಿಸಿ ಮಹಿಳೆಯರಿಗೆ ತ್ರಿಶೂಲ ಆಕಾರದ ಆಯುಧ ನೀಡಿದ ಮತ್ತು ದ್ವೇಷ ಭಾಷಣ ಮಾಡಿದ ಆರೋಪದಡಿ ಪ್ರಮೋದ್ ಮುತಾಲಿಕ್ ಸೇರಿದಂತೆ ಆರು ಜನರ ವಿರುದ್ಧ ಸ್ಥಳೀಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಇತರರು ಕಾರ್ಯಕ್ರಮ ಆಯೋಜಿಸಲು ಪೂರ್ವ ಅನುಮತಿ ಪಡೆಯದೆ ಅಕ್ರಮವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಮುತಾಲಿಕ್ ಅವರು ತಮ್ಮ ಭಾಷಣದಲ್ಲಿ ಅನ್ಯಕೋಮಿನ ಹೆಸರು ಉಲ್ಲೇಖಿಸಿ ದ್ವೇಷ ಭಾಷಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತ್ರಿಶೂಲದ ಬದಲಾಗಿ ತಲ್ವಾರ್ ನೀಡುತ್ತೇವೆ. ತಾಕತ್ತಿದ್ದರೆ ತಡೆಯಿರಿ ನೋಡೋಣ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಮೋದ್ ಮುತಾಲಿಕ್, ಅಣ್ಣಪ್ಪ ದಿವಟಗಿ, ಮಹಾಂತೇಶ ಟೋಂಗಳೆ, ಮಂಜುನಾಥ ಕಾಟ್ಕರ್, ಬಸವರಾಜ ದರ್ಗಾದ, ಬಸವರಾಜ ಗೌಡರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.

