ಭೋಪಾಲ್: ಕಾರೊಂದು ಭೀಕರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆ ಸಜೀವದಹನವಾಗಿರುವ ಘಟನೆ ಮಧ್ಯಪ್ರದೇಶದ ಸಾಗರ್-ದಾಮೋಹ್ ಹೆದ್ದಾರಿಯಲ್ಲಿ ನಡೆದಿದೆ.
ಸಾಗರ್-ದಾಮೋಹ್ ಹೆದ್ದಾರಿಯ ಚಾನಟೋರಿಯಾ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ಕಾಅರಿನಲ್ಲಿದ್ದ ಸೀಮಾ (35) ಎಂಬ ಮಹಿಳೆ ಸಜೀವವಾಗಿ ದಹನವಾಗಿದ್ದಾರೆ. ಕಾರಿನಲ್ಲಿದ್ದ ಅವರ ಪತಿ ವೈದ್ಯ ನೀಲೇಶ್ ಕುರ್ಮಿ ಮತ್ತು ಇತರೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಮೃತ ಮಹಿಳೆಯ ಸಂಬಂಧಿಕರು ಅಪಘಾತದಲ್ಲಿ ಮಹಿಳೆ ಸಜೀವದಹನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಅಪಘಾತದಿಂದ ಸಂಭವಿಸಿದ ಘಟನೆ ಅಲ್ಲ, ಇದೊಂದು ಪಿತೂರಿ ಆಗಿರಬಹುದು ಎಂದು ಶಂಕಿಸಿದ್ದಾರೆ.
ಘಟನೆ ಬಗ್ಗೆ ಮೃತ ಮಹಿಳೆಯ ಸಹೋದರ ಲೋಕೇಶ್ ಪಟೇಲ್ ಮಾತನಾಡಿ, ನೀಲೇಶ್ ಕುರ್ಮಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ನಿ ಸೀಮಾ ಎದೆನೋವಿನಿಂದ ಅಸ್ವಸ್ಥಳಾಗಿದ್ದು, ಸಾಗರ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವುದಾಗಿ ಡಾ. ನೀಲೇಶ್ ಕುರ್ಮಿ ತಡರಾತ್ರಿ ನಮಗೆ ಕರೆ ಮಾಡಿ ತಿಳಿಸಿದ್ದರು. ಈ ಸುದ್ದಿ ಕೇಳಿ ನಮ್ಮ ಕುಟುಂಬ ಕೂಡ ಸಾಗರ್ಗೆ ತೆರಳಿತ್ತು. ಅವರು ತಮ್ಮ ಮನೆಯಿಂದ ಹೊರಟಿದ್ದರೆ, ನಾವು ನಮ್ಮ ಮನೆಯಿಂದ ತೆರಳುತ್ತಿದ್ದೆವು. ಆದರೆ, ಮಾರ್ಗ ಮಧ್ಯದಲ್ಲಿ, ಚಾನಾ ಟೋರಿಯಾ ಟೋಲ್ ಪ್ಲಾಜಾ ಬಳಿ ತಮ್ಮ ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದ್ದು, ನಿಮ್ಮ ಮಗಳು ಸೀಮಾ ಕಾರಿನಲ್ಲಿ ಸಿಲುಕಿ ಜೀವಂತವಾಗಿ ಸುಟ್ಟುಹೋಗಿರುವುದಾಗಿ ಹಾಗೂ ತಾವು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ನೀಲೇಶ್ ಹೇಳಿದ್ದಾರೆ.
ನಾವು ಘಟನಾ ಸ್ಥಳಕ್ಕೆ ಬಂದು ನೋಡಿದಾಗ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಕಾರಿನಲ್ಲಿದ್ದ ಐವರ ಪೈಕಿ ನಮ್ಮ ಸಹೋದರಿ ಮಾತ್ರ ಸಜೀವ ದಹನವಾಗಿದ್ದಳು. ಪತಿ ನೀಲೇಶ್ ಕುರ್ಮಿ ಸೇರಿ ನಾಲ್ವರಿಗೆ ಯಾವುದೇ ಗಾಯಗಳಾಗಿಲ್ಲ. ಹಾಗಾಗಿ ಇದೊಂದು ಷಡ್ಯಯಂತ್ರವಲ್ಲದೇ ಮತ್ತೇನು ಅಲ್ಲ ಎಂಬ ಅನುಮಾನ ಮೂಡುತ್ತಿದೆ. ತನ್ನ ಸಹೋದರಿ ಮತ್ತು ಆಕೆಯ ಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ಇದು ರಸ್ತೆ ಅಪಘಾತವಲ್ಲ, ಕೊಲೆ ಎಂದು ಲೋಕೇಶ್ ಪಟೇಲ್ ಅನುಮಾನವ್ಯಕ್ತಪಡಿಸಿದ್ದಾರೆ.
ಸನೋಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

