ಶಿಲ್ಲಾಂಗ್: ಎರಡು ದಶಕಗಳ ಕಾಲ ಜೈಲಿನ ಕತ್ತಲಲ್ಲಿ ಕಳೆದ ಮಹಿಳೆಯೊಬ್ಬರಿಗೆ ಮೇಘಾಲಯ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ತನ್ನ ಪತಿ ಮತ್ತು ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಹಿಳೆಯನ್ನು ಹೈಕೋರ್ಟ್ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಖಲಾಸೆ ಮಾಡಿದೆ. ಕೆಳಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಕೇವಲ ಬಲವಂತದ ಒಪ್ಪಿಗೆಯ ಆಧಾರದ ಮೇಲೆ ಶಿಕ್ಷೆ ನೀಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿದೆ.
ಏನಿದು ಘಟನೆ? ಈ ಪ್ರಕರಣವು 2003ರ ಮಾರ್ಚ್ 28 ರಂದು ನಡೆದಿತ್ತು. ಅಂದು ಬೆಳಿಗ್ಗೆ ಮಹಿಳೆಯು ತನ್ನ ಪತಿಯೊಂದಿಗೆ ಜಗಳವಾಡಿ, ಕೊಡಲಿಯಂತಹ ಆಯುಧದಿಂದ ಪತಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾಳೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು. ಈ ಘಟನೆಯಲ್ಲಿ ಪತಿ ಮತ್ತು ಮಗ ಸಾವನ್ನಪ್ಪಿದ್ದರು. ಅಲ್ಲದೆ ಆಕೆ ತನ್ನ ಎರಡು ವರ್ಷದ ಮಗಳಿಗೂ ಗಾಯಗೊಳಿಸಿ, ನಂತರ ತಾನೂ ಗಾಯ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿತ್ತು. 2021ರಲ್ಲಿ ವಿಚಾರಣಾ ನ್ಯಾಯಾಲಯವು ಈಕೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್ ನೀಡಿದ ಕಾರಣಗಳೇನು? ಮುಖ್ಯ ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ದಿಯಂಗ್ಡೋ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕೆಲವು ಪ್ರಮುಖ ಅಂಶಗಳನ್ನು ಎತ್ತಿ ತೋರಿಸಿದೆ:
ಮೊದಲನೆಯದಾಗಿ, ಪ್ರಾಸಿಕ್ಯೂಷನ್ ಸಲ್ಲಿಸಿದ ಪುರಾವೆಗಳು ಅಪೂರ್ಣವಾಗಿವೆ. ಘಟನೆ ನಡೆದ ಸಮಯದಲ್ಲಿ ಮನೆಯೊಳಗೆ ಯಾರು ಇದ್ದರು ಅಥವಾ ಏನಾಯಿತು ಎಂಬುದಕ್ಕೆ ಯಾವುದೇ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಿಲ್ಲ. ಎರಡನೆಯದಾಗಿ, ಮಹಿಳೆ ನೀಡಿದ್ದಾಳೆ ಎನ್ನಲಾದ ತಪ್ಪೊಪ್ಪಿಗೆಯ ಹೇಳಿಕೆಯು ಕಾನೂನುಬದ್ಧವಾಗಿ ಸರಿಯಾಗಿಲ್ಲ. ಆಕೆಗೆ ತನ್ನ ಹೇಳಿಕೆಯ ಬಗ್ಗೆ ಆಲೋಚಿಸಲು ಯಾವುದೇ ಸಮಯ ನೀಡಿರಲಿಲ್ಲ ಮತ್ತು ಅದು ಸ್ವಯಂಪ್ರೇರಿತವಾಗಿತ್ತು ಎಂದು ನಂಬಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಪ್ರಾಸಿಕ್ಯೂಷನ್ ತನ್ನ ಸ್ವಂತ ಬಲದ ಮೇಲೆ ಪ್ರಕರಣವನ್ನು ಸಾಬೀತುಪಡಿಸಬೇಕು, ಆರೋಪಿಯ ಪರವಾದ ವಾದದ ದೌರ್ಬಲ್ಯವನ್ನು ಬಳಸಿಕೊಂಡು ಶಿಕ್ಷೆ ನೀಡಬಾರದು” ಎಂದು ಹೈಕೋರ್ಟ್ ಮಾರ್ಚ್ 18 ರಂದು ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸುಮಾರು 22 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಮಹಿಳೆಯು ಈಗ ಬಂಧಮುಕ್ತಳಾಗಿದ್ದಾರೆ. 2021ರ ಶಿಕ್ಷೆಯ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ಹೈಕೋರ್ಟ್, ಆಕೆಯನ್ನು ಗೌರವಯುತವಾಗಿ ಬಿಡುಗಡೆ ಮಾಡಲು ಆದೇಶಿಸಿದೆ.

