ರಾಯ್ಪುರ: ಅಣ್ಣ-ತಂಗಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಅಣ್ಣ ಗದರಿದ್ದಕ್ಕೆ ಮನನೊಂದ 10 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಛತ್ತೀಸ್ ಗಢದ ಭಿಲಾಯಿಯ ದುರ್ಗ್ನಲ್ಲಿ ಈ ಘಟನೆ ನಡೆದಿದೆ. ಯಾವುದೋ ವಿಷಯಕ್ಕೆ ಅಣ್ಣ-ತಂಗಿ ನಡುವೆ ಜಗಳವಾಗಿದೆ. ಅಣ್ಣ ತನ್ನ ತಂಗಿಯನ್ನು ಗದರಿಸಿದ್ದಾನೆ. ಇದರಿಂದ ನೊಂದ ಬಾಲಕಿ ಮತ್ತೊಂದು ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ವೇಳೆ ಪೋಷಕರು ಮನೆಯಲ್ಲಿರಲಿಲ್ಲ. ಮನೆಗೆ ಬಂದು ನೋಡಿದಾಗ ಬಾಲಕಿ ನೇಣಿಗೆ ಕೊರಳೊಡ್ಡಿದ್ದಳು. ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಮ್ರ್ಯ್ತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಾಲಕಿ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ದುರ್ಗ್ನ ಗಣೇಶ್ ನಗರದಲ್ಲಿ ವಾಸಿಸುತ್ತಿದ್ದಳು. ತಂದೆ ಚಾಲಕ ಮತ್ತು ತಾಯಿ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ದರಿಂದ, ಇಬ್ಬರೂ ಹೊರಗೆ ಹೋಗಿದ್ದರು. ಈ ಸಮಯದಲ್ಲಿ, ಅಣ್ಣ-ತಂಗಿ ನಡುವೆ ಜಗಳವಾಗಿದೆ. ಅಣ್ಣ ಬೈದನೆಂಬ ಕಾರಣಕ್ಕೆ ಬಾಲಕಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಪುಟ್ಟ ಬಾಲಕಿ ಆತ್ಮಹತ್ಯೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

