ಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಎದೆ ಸೀಳಿದರೆ ಮೂರಕ್ಷರವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿಯವರು ಪೊಲೀಸರ ನೋಟಿಸ್‌ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಕೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣದಲ್ಲಿ ನೋಟಿಸ್ ಕಡ್ಡಾಯ. ಪೊಲೀಸರ ನೋಟಿಸ್‌ಗೆ ಸಮಾಜಾಯಿಷಿ ನೀಡಲು 7 ದಿನಗಳ ಕಾಲಾವಕಾಶ ಇರುತ್ತಿತ್ತು. ಈಗ ಪೊಲೀಸರು ನೀಡಿರುವ ಸಮಯ ನಿಸ್ಸಂದೇಹವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.
ನಾನು ಹಾಲಿ ಪರಿಷತ್ ಸದಸ್ಯ ಆಗಿರುವುದರಿಂದ ಪಕ್ಷದ ಬೇರೆ ಜವಾಬ್ದಾರಿಗಳಿವೆ. ರಾಯಚೂರು-ಕೊಪ್ಪಳ ಜಿಲ್ಲೆಗೆ ಬರ ಪರೀಶಿಲನೆಗೆ ತೆರಳಬೇಕಿದೆ. ಜು.29 ಹಾಗೂ 30ರಂದು ಪಕ್ಷದ ತುರ್ತು ಕೆಲಸಗಳಿಗೆ ತೆರಳಬೇಕಿದೆ. ಆನಂತರ ಕಾನೂನು ಸಲಹೆಗಾರರ ಸಲಹೆ ಪಡೆದು ಸಮಾಜಾಯಿಷಿ ನೀಡುತ್ತೇನೆ. ನನಗೆ ಉತ್ತರ ನೀಡಲು 7 ದಿನಗಳ ಕಾಲಾವಕಾಶಬೇಕು ಎಂದು ಪೊಲೀಸರ ಬಳಿ ಕೇಳಿದ್ದಾರೆ. ಸಿ.ಟಿ.ರವಿ ಅವರ ಕೋರಿಕೆಗೆ ಪೊಲೀಸರು ಯಾವುದೇ ಪ್ರತಿಕ್ರೊಯೆ ನೀಡಿಲ್ಲ. ಬದಲಾಗಿ ಅವರಿಗೆ ಮತ್ತೊಂದು ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಜು.25 ರಂದು ಚಿಕ್ಕಮಗಳೂರಿನಲ್ಲಿ ನಡೆದ ಯೂತ್ ಫಾರ್ ನೇಷನ್ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ಜು.26 ರಂದು ಪೊಲೀಸರು ನೋಟಿಸ್ ಸಹ ನೀಡಲು ಅವರ ಮನೆಗೆ ತೆರಳಿದ್ದರು. ಈ ವೇಳೆ ನೋಟಿಸ್ ಸ್ವೀಕರಿಸದೇ ಪೊಲೀಸರನ್ನು ವಾಪಸ್ ಕಳಿಸಿದ್ದರು.

