ಕರ್ನಾಟಕ ಸರ್ಕಾರ ತಿ.ನರಸೀಪುರ ಪಟ್ಟಣದಲ್ಲಿರುವ ಕೆಎಸ್ಐಸಿ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಒಂದು ಕಡೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಭವಿಷ್ಯದ ಕುರಿತು ಆತಂಕಗೊಂಡಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಮೈಸೂರು ಪರಂಪರೆಯ ಮೇಲೆ ಅದೇಕೋ ಮೊದಲಿನಿಂದಲೂ ಕಾಂಗ್ರೆಸ್ ಸರ್ಕಾರ ತೀವ್ರ ಅಸಡ್ಡೆಯ ದೃಷ್ಠಿ ಬೀರುತ್ತಾ ಬಂದಿದೆ’ ಎಂದು ಆರೋಪಿಸಿದ್ದಾರೆ.
‘ಮೈಸೂರು ಅರಮನೆ ಸೇರಿದಂತೆ ಪಾರಂಪರಿಕ ಕಟ್ಟಡಗಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ಬಹುಬೇಡಿಕೆಯಲ್ಲಿರುವ ಮೈಸೂರು ಸಿಲ್ಕ್ ಉತ್ಪನ್ನಗಳ ತಯಾರಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಿದೆ’ ಎಂದು ದೂರಿದ್ದಾರೆ.
‘ಅದರ ಮುಂದುವರಿದ ಭಾಗವಾಗಿ 1912 ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಟಿ. ನರಸೀಪುರದ ಸಿಲ್ಕ್ ಫಿಲೇಚರ್ ಫ್ಯಾಕ್ಟರಿಯನ್ನು ಮುಚ್ಚಿಸಲು ಹೊರಟು ಅಲ್ಲಿರುವ ಅಮೂಲ್ಯ ವೃಕ್ಷಗಳನ್ನು ಹನನ ಮಾಡಿ, ನೂರಾರು ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವ ಕ್ರಮ ಅತ್ಯಂತ ಖಂಡನೀಯ’ ಎಂದು ಹೇಳಿದ್ದಾರೆ.
‘ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸ್ಥಳೀಯರ ವಿರೋಧ ಹಾಗೂ ಪರಿಸರ ಪ್ರೇಮಿಗಳ ಆಕ್ರೋಶ ಎದುರಿಸಲು ಸಿದ್ಧವಾಗಲಿ. ಈ ಸಂಬಂಧ ನಡೆಯುವ ಹೋರಾಟವನ್ನು ಬಿಜೆಪಿ ಕರ್ನಾಟಕ ಬೆಂಬಲಿಸಲಿದೆ’ ಎಂದು ವಿಜಯೇಂದ್ರ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಸ್ತಾವನೆಗೆ ವಿರೋಧ: ಮೈಸೂರು ಸಮೀಪದ ಟಿ. ನರಸೀಪುರದಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್ಐಸಿ) ರೇಷ್ಮೆ ನೂಲುವ ಕಾರ್ಖಾನೆಯ ಆವರಣದ 5 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆ ವಿರೋಧಕ್ಕೆ ಕಾರಣವಾಗಿದೆ.
ಈ ಪ್ರಸ್ತಾವನೆಯ ಕಾರಣಕ್ಕೆ ಕಾರ್ಖಾನೆಯ ಕಾರ್ಮಿಕರಲ್ಲಿ ಅನಿಶ್ಚಿತತೆ ಮೂಡಿದೆ. ಈ ಕಾರ್ಖಾನೆಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ನೂಲನ್ನು ಉತ್ಪಾದಿಸಿ ಮೈಸೂರು ಮತ್ತು ಚನ್ನಪಟ್ಟಣದ ನೇಕಾರರ ಗುಂಪುಗಳಿಗೆ ಪೂರೈಸಲಾಗುತ್ತದೆ.
1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ಈ ಕಾರ್ಖಾನೆಯು, ಭೌಗೋಳಿಕ ಸೂಚ್ಯಂಕ (ಜಿಐ) ಟ್ಯಾಗ್ ಹೊಂದಿರುವ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಮೈಸೂರು ಸಿಲ್ಕ್ ಸೀರೆಗಳ ತಯಾರಿಕೆಗೆ ಬಳಸುವ ಅತ್ಯುತ್ತಮ ಗುಣಮಟ್ಟದ ರೇಷ್ಮೆ ನೂಲನ್ನು ಉತ್ಪಾದಿಸುತ್ತದೆ.
ರಾಜಕೀಯ ನಾಯಕರ ವಿರೋಧ ಬದಿಗಿಟ್ಟು ನೋಡುವುದಾದರೂ ವಿವಿಧ ಸಂಘಟನೆಗಳು, ಪರಿಸರವಾದಿಗಳು ಮತ್ತು ಕಾರ್ಮಿಕ ಪ್ರತಿನಿಧಿಗಳು ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

