ಲಖನೌ: ತಂದೆ-ತಾಯಿಗಳಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು. ದೊಡ್ಡ ಹುದ್ದೆಯಲ್ಲಿ ಇರಬೇಕು ಎಂದು ಸಾಕಷ್ಟು ಕನಸುಗಳಿರುತ್ತವೆ. ಆ ಕನಿಸಿಗೆ ಪೂರಕವಾಗಿ ಮಕ್ಕಳ ವಿದ್ಯಾಭ್ಯಸಗಳತ್ತ ಗಮನವನ್ನೂ ಹರಿಸಿರುತ್ತಾರೆ. ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಇದೇ ರೀತಿ ಚನ್ನಾಗಿ ಓದಿ ಡಾಕ್ಟರ್ ಆಗು ಆಗು ಎಂದು ತಂದೆ ಮಗನಿಗೆ ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಮಗ ತಂದೆಯನ್ನೇ ಗುಂಡಿಕ್ಕಿ ಕೊಂದಿರುವ ಘೋರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತಾವು ಸಾಧಿಸಲಾಗದ್ದನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂದು ಪೋಷಕರು ಮಹದಾಸೆ ಇಟ್ಟುಕೊಂಡಿರುತ್ತಾರೆ. ಅದೇ ರೀತಿ ತಂದೆಯೊಬ್ಬ ತನ್ನ ಮಗನಿಗೆ ಚನ್ನಾಗಿ ಓದು ಡಾಕ್ಟರ್ ಆಗು ಎಂದು ಮಗನ ನೀಟ್ ಪರೀಕ್ಷೆಗೆ ಒತ್ತಡ ಹಾಕಿದ್ದಾನೆ. ತಂದೆ ಒತ್ತಡಕ್ಕೆ ಬೇಸತ್ತ ಮಗ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಡ್ರಮ್ನಲ್ಲಿಟ್ಟಿದ್ದಾನೆ.
ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಮಗನಿಂದಲೇ ಕೊಲೆಯಾದ ತಂದೆ. ಅಕ್ಷತ್ ಪ್ರತಾಪ್ ಸಿಂಗ್ ತಂದೆಯನ್ನೇ ಕೊಂದ ಮಗ. ಮನ್ವೇಂದರ್ ಸಿಂಗ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕೇಸ್ ದಾಖಲಾಗಿತ್ತು. ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಬ್ಯಾರೆಲ್‌ನಲ್ಲಿ ದೇಹದ ಭಾಗಗಳನ್ನು ಕಂಡು ದಂಗಾಗಿದ್ದಾರೆ.
ಮನ್ವೇಂದ್ರ ಸಿಂಗ್ ಫೆಬ್ರವರಿ 20ರಂದು ಸಿಂಗ್ ಕಾಣೆಯಾಗಿದ್ದರು, ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಮಗ ಅಕ್ಷತ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ತಂದೆ ತನ್ನನು ಪದೇ ಪದೇ ಬೈದಿದ್ದರಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅಕ್ಷತ್ ತಾನು 12 ನೇ ತರಗತಿಯಲ್ಲಿ ಜೀವಶಾಸ್ತ್ರ ಪದವಿಯೊಂದಿಗೆ ಉತ್ತೀರ್ಣನಾಗಿದ್ದೇನೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ತನ್ನ ತಂದೆಯಿಂದ ಒತ್ತಡ ಇತ್ತು. ಸದಾಕಾಲ ಬೈಯ್ಯುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳವಾಅಗುತ್ತಿತ್ತು.
ಫೆಬ್ರವರಿ 20 ರಂದು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು ಎಂದು ಡಿಸಿಪಿ ವಿಕ್ರಾಂತ್ ವೀರ್ ದೃಢಪಡಿಸಿದರು. ಕೋಪದ ಭರದಲ್ಲಿ, ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಕೊಂದಿದ್ದ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಸ್ಥಳಾಂತರಿಸುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದ.
ಅಕ್ಷತ್ ತನ್ನ ತಂದೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ, ಕೆಲವನ್ನು ಸದಾರೋನಾ ಗ್ರಾಮದ ಬಳಿ ಎಸೆದಿದ್ದ ಮತ್ತು ಉಳಿದ ಭಾಗಗಳನ್ನು ಮನೆಯಲ್ಲಿ ಡ್ರಮ್‌ನಲ್ಲಿ ಮರೆಮಾಡಿದ್ದ. ದೇಹದ ಭಾಗಗಳನ್ನು ನೆಲ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಶವ ಪತ್ತೆಯಾದ ನಂತರ, ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪೊಲೀಸರು ಅಕ್ಷತ್ ನನ್ನು ಬಂಧಿಸಿ ಮುಂದಿನ ತನಿಖೆ ಮತ್ತು ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತನ ಉಳಿದ ದೇಹದ ಭಾಗಗಳಿಗಾಗಿ ಹುಡುಕಾಟ ಮುಂದುವರೆದಿದೆ.

