ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತುಗಳಿಗೆ ನಿಷೇಧ ಹೇರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಆದೇಶ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ ಗಳಲ್ಲಿ ವಿವಿಧ ಜಾಹೀರಾತುಗಳು, ಅದರಲ್ಲಿಯೂ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಗಳೇ ರಾರಾಜಿಸುತ್ತಿದ್ದವು. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ತಂಬಾಕು ಉತ್ಪನ್ನಗಳ ಜಾಹೀರಾತಿನ ಮೂಲಕ ತಂಬಾಕು ಸೇವನೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ, ಸರ್ಕಾರಿ ಬಸ್ ಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತು ಹಾಕುವಂತಿಲ್ಲ. ಬಸ್ ಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತಿಗೆ ನಿರ್ಬಂಧಿಸಲು ಸೂಚಿಸಿದ್ದಾರೆ.
ನಾಲ್ಕು ನಿಗಮಗಳ ಸಾರಿಗೆ ಬಸ್ ಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ನಿಯಮ ಮೀರಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಸಚಿವರ ಸೂಚನೆ ಬೆನ್ನಲ್ಲೇ ಬಸ್ ಗಳಲ್ಲಿದ್ದ ತಂಬಾಕು ಜಾಹೀರಾತುಗಳನ್ನು ತೆರವುಗೊಳಿಸಲಾಗುತ್ತಿದೆ.

