ಬೆಂಗಳೂರು: ಬೆಂಗಳೂರಿನಲ್ಲಿ ಮಗನಿಂದಲೇ ಹೆತ್ತ ತಂದೆ, ತಾಯಿಯ ಬರ್ಬರ ಹತ್ಯೆ ನಡೆದಿದೆ. ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ.
ನವೀನ್ ಚಂದ್ರ ಭಟ್(60), ಡಾ. ಶ್ಯಾಮಲಾ ಭಟ್(55) ಕೊಲೆಯಾದವರು ಎಂದು ಹೇಳಲಾಗಿದೆ. ಕೌಟುಂಬಿಕ ವಿಚಾರಕ್ಕೆ ಪುತ್ರ ರೋಹನ್ ಭಟ್(33) ಕೃತ್ಯವೆಸಗಿದ ಆರೋಪ ಕೇಳಿ ಬಂದಿದೆ. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿದ್ದಾರೆ. ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದಾರೆ.
ಬೆಳಗ್ಗೆ 7.30ರ ಸುಮಾರಿಗೆ ಹೆತ್ತ ತಂದೆ ಮತ್ತು ತಾಯಿಗೆ ಪುತ್ರ ಚಾಕುವಿನಿಂದ ಇರಿದಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ಆರೋಪಿ ಪುತ್ರ ರೋಹನ್ ಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿದೇಶದಲ್ಲಿರುವ ಮಗಳು ನಾಳೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಹೆಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

