HomeKarnatakaBREAKING : ಇಂದಿನಿಂದ ಮನೆ ಬಾಗಿಲಿಗೆ ಬರಲಿದೆ ಸರ್ಕಾರ : ಪ್ರಜಾಸೇವೆ ಅಭಿಯಾನಕ್ಕೆ ಸಿಎಂ ಡಿ.ಕೆ...

BREAKING : ಇಂದಿನಿಂದ ಮನೆ ಬಾಗಿಲಿಗೆ ಬರಲಿದೆ ಸರ್ಕಾರ : ಪ್ರಜಾಸೇವೆ ಅಭಿಯಾನಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಚಾಲನೆ |WATCH VIDEO

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದ ಜನರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಸರ್ಕಾರದ ಸೇವೆಗಳು ಮತ್ತು ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಪ್ರಜಾಸೇವೆ ಅಭಿಯಾನ’ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 5ರಂದು ಕೂಡ್ಲಿಗಿಯಲ್ಲಿ ಅಧಿಕೃತ ಚಾಲನೆ ನೀಡಿದ್ದಾರೆ.

ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲು ಸಹಕಾರ’ ಎಂಬ ಆಶಯದೊಂದಿಗೆ ಈ ಅಭಿಯಾನ ರೂಪಿಸಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳೀಯ ಮಟ್ಟದಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಪ್ರತಿ ಶನಿವಾರ ಜನರ ಅಹವಾಲು ಸ್ವೀಕಾರ

ಪ್ರತಿ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ಸಭೆ ನಡೆಯಲಿದ್ದು, ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆ ಬಾಗಿಲಿನಲ್ಲೇ ಅಹವಾಲು ಸ್ವೀಕಾರ

ಸರ್ಕಾರಿ ಸೇವೆ ಹಾಗೂ ಸೌಲಭ್ಯ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳನ್ನು ಜನರು ಸರಳವಾಗಿ ಅಧಿಕಾರಿಗಳ ಗಮನಕ್ಕೆ ತರಲು ಈ ಅಭಿಯಾನದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ವಿವಿಧ ಇಲಾಖೆಗಳ ದೂರುಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವ ವ್ಯವಸ್ಥೆ ರೂಪಿಸಲಾಗಿದೆ.

ಕಚೇರಿ ಅಲೆದಾಟಕ್ಕೆ ಬೀಳಲಿದೆ ಬ್ರೇಕ್?

ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಆಡಳಿತವನ್ನು ಮತ್ತಷ್ಟು ಜನಸ್ನೇಹಿಯಾಗಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. “ಎಲ್ಲ ಸಮಸ್ಯೆಗಳನ್ನೂ ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಮತ್ತು ಭಾವನೆಗಳನ್ನು ನೇರವಾಗಿ ತಿಳಿದುಕೊಂಡರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

15 ದಿನ ಮೊದಲೇ ಮಾಹಿತಿ

ಪ್ರಜಾಸೇವಾ ಸಭೆಯ ದಿನಾಂಕ, ಸ್ಥಳ ಮತ್ತು ಸಮಯದ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಮನೆ-ಮನೆಗೆ ಕರಪತ್ರಗಳನ್ನು ವಿತರಿಸುವುದರ ಜೊತೆಗೆ, AI ಆಧಾರಿತ ಕಾಲ್ ಸೆಂಟರ್ ಮೂಲಕವೂ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ತಮ್ಮ ಅರ್ಜಿ ಮತ್ತು ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಸಭಾ ಸ್ಥಳಗಳಲ್ಲಿಯೂ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಬಾಕಿ ದೂರುಗಳಿಗೂ ಆದ್ಯತೆ

ಈಗಾಗಲೇ ಸಕಾಲ ಅಥವಾ ಏಕೀಕೃತ ದೂರು ನಿವಾರಣಾ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಿದ್ದರೂ 21 ದಿನಗಳ ಬಳಿಕವೂ ಸಮರ್ಪಕ ಪರಿಹಾರ ದೊರೆಯದ ಪ್ರಕರಣಗಳನ್ನೂ ಪ್ರಜಾಸೇವಾ ಸಭೆಯಲ್ಲಿ ಪರಿಗಣಿಸಲಾಗುತ್ತದೆ.

ಅರ್ಜಿದಾರರು ತಮ್ಮ ಸಕಾಲ, CSC ಅಥವಾ IPGRS ಸಂಖ್ಯೆಯನ್ನು ನೀಡುವ ಮೂಲಕ ಬಾಕಿ ಇರುವ ಅಹವಾಲಿನ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು. ಅರ್ಜಿ ಮತ್ತು ದೂರುಗಳ ಪ್ರಗತಿಯನ್ನು ತಿಳಿದುಕೊಳ್ಳಲು ನೈಜ-ಸಮಯದ ಸ್ಥಿತಿ ಪರಿಶೀಲನಾ ವ್ಯವಸ್ಥೆಯನ್ನೂ ರೂಪಿಸಲಾಗಿದೆ.

ಪ್ರತಿ ಬುಧವಾರ ಮೂರು ಹಂತದ ಪರಿಶೀಲನೆ

ಪ್ರಜಾಸೇವಾ ಸಭೆಗಳಲ್ಲಿ ಸ್ವೀಕರಿಸಿದ ಅರ್ಜಿಗಳು ಮತ್ತು ಅಹವಾಲುಗಳ ಕುರಿತು ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲನೆ ನಡೆಯಲಿದೆ.

  • ಬೆಳಗ್ಗೆ 9ರಿಂದ 11ರವರೆಗೆ: ತಾಲ್ಲೂಕು ಮಟ್ಟದ ಪರಿಶೀಲನೆ

  • ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ: ಉಪವಿಭಾಗ ಮಟ್ಟದ ಪರಿಶೀಲನೆ

  • ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ: ಜಿಲ್ಲಾ ಮಟ್ಟದ ಪರಿಶೀಲನೆ

ನಿಗದಿತ ಅವಧಿಯಲ್ಲಿ ಪರಿಹಾರವಾಗದ ಅರ್ಜಿಗಳನ್ನು ಮೇಲ್ದರ್ಜೆಯ ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ವರ್ಗಾಯಿಸುವ ವ್ಯವಸ್ಥೆಯೂ ಇರಲಿದೆ.

1902ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು

ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು 1902 ಸಹಾಯವಾಣಿ ಮೂಲಕ ಅಥವಾ ಕರ್ನಾಟಕ ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪೋರ್ಟಲ್ ಮೂಲಕ ದಾಖಲಿಸಬಹುದಾಗಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಅಧಿಕಾರಿಗಳ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular