ಕೊಚ್ಚಿ: ಈ ವಾರದ ಆರಂಭದಲ್ಲಿ ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ ‘ದಿ ಕೇರಳ ಸ್ಟೋರಿ 2’ ಚಿತ್ರದ ಬಿಡುಗಡೆಗೆ ತಡೆ ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ಮೂಲತಃ ನಿಗದಿಯಾಗಿದ್ದ ಫೆಬ್ರವರಿ 27 ರಂದು ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.
‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ 15 ದಿನಗಳ ಕಾಲ ತಡೆ ನೀಡಿದ್ದು, ಈ ಸಿನಿಮಾ ನಾಳೆ ಬಿಡುಗಡೆಯಾಗುವುದಿಲ್ಲ. ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣದ ಮತ್ತು ಕಾಮಾಖ್ಯ ನಾರಾಯಣ ಸಿಂಗ್ ನಿರ್ದೇಶನದ ‘ದಿ ಕೇರಳ ಸ್ಟೋರಿ 2’, ಹಿಂದೂ ಯುವತಿಯರನ್ನು ಅಂತರ್ಧರ್ಮೀಯ ವಿವಾಹದ ಹೆಸರಿನಲ್ಲಿ ನಂಬಿಸಿ, ನಂತರ ಅವರ ಮೇಲೆ ಹಲ್ಲೆ ನಡೆಸಿ, ಹಕ್ಕುಗಳನ್ನು ಕಸಿದುಕೊಂಡು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತದೆ ಎಂದು ಪ್ರತಿಪಾದಿಸುತ್ತದೆ.
ಬುಧವಾರ ನಡೆದ ವಿಚಾರಣೆಯ ವೇಳೆ, ಅರ್ಜಿದಾರರ ಆತಂಕಗಳು “ಬಹುಶಃ ನಿಜವಿರಬಹುದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಜೀವಶಾಸ್ತ್ರಜ್ಞ ಶ್ರೀದೇವ್ ನಂಬೂದಿರಿ ಎಂಬುವವರು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಚಿತ್ರದ ಟ್ರೈಲರ್ ಕೇರಳವನ್ನು ಅತ್ಯಂತ ನಕಾರಾತ್ಮಕವಾಗಿ ಬಿಂಬಿಸುತ್ತಿದೆ ಮತ್ತು ಇದು ಸಾಮಾಜಿಕವಾಗಿ ಕೆಟ್ಟ ಪರಿಣಾಮ ಬೀರಬಹುದು ಎಂದು ಅರ್ಜಿ ಸಲ್ಲಿಸಿದ್ದರು.
ಈ ಮನವಿಯ ಮೇರೆಗೆ ಕ್ರಮ ಕೈಗೊಂಡ ಕೇರಳ ಹೈಕೋರ್ಟ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B), ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಮತ್ತು ಚಿತ್ರದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದೆ.
ಚಿತ್ರದ ಬಗ್ಗೆ
‘ದಿ ಕೇರಳ ಸ್ಟೋರಿ 2’ ಸಿನಿಮಾವು ಧಾರ್ಮಿಕ ಮತಾಂತರ ಮತ್ತು ಬಲವಂತದ ಮತಾಂತರದ ವಿಷಯಗಳನ್ನು ಒಳಗೊಂಡಿದೆ. ಈ ಚಿತ್ರದ ಕಥೆಯು ಕೇರಳ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸಾಗುತ್ತದೆ ಎಂದು ವರದಿಯಾಗಿದೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಜಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು ಫೆಬ್ರವರಿ 27, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಆದರೆ, ಹೈಕೋರ್ಟ್‌ನ ಮಧ್ಯಂತರ ತಡೆಯಾಜ್ಞೆಯಿಂದಾಗಿ ಚಿತ್ರದ ಭವಿಷ್ಯವು ಈಗ ನ್ಯಾಯಾಲಯದ ಮುಂದಿನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

