HomeKarnatakaಉತ್ತರ ಕನ್ನಡದಲ್ಲಿ ಡಿಜಿಟಲ್ ಜನಗಣತಿ: ಹೇಗಿದೆ ತಯಾರಿ?

ಉತ್ತರ ಕನ್ನಡದಲ್ಲಿ ಡಿಜಿಟಲ್ ಜನಗಣತಿ: ಹೇಗಿದೆ ತಯಾರಿ?

“ಜನಗಣತಿ ಕಾರ್ಯವು ರಾಷ್ಟ್ರದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ದೇಶದ ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು” ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷೀಪ್ರಿಯಾ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚಾರ್ಜ್ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. “ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಯಾವುದೇ ಯೋಜನೆಗಳನ್ನು ರೂಪಿಸಲು ಜನಗಣತಿಯ ಮಾಹಿತಿಯು ಅತ್ಯಂತ ಪ್ರಮುಖವಾಗಿದ್ದು, ಜನಗಣತಿಯ ಆಧಾರದಲ್ಲಿಯೇ ಸರ್ಕಾರಗಳು ಆಯವ್ಯಯ ಸಿದ್ದಪಡಿಸಲು, ವಸತಿ, ಮೂಲಸೌಕರ್ಯ ಸೇರಿದಂತೆ ಸಾರ್ವಜನಿಕ ಸೇವೆಗಳಿಗಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ಅಂಕಿ ಅಂಶಗಳು ಬಳಕೆಯಾಗುವ ಕಾರಣ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಸ್ಪಷ್ಟವಾದ ಮಾಹಿತಿಗಳನ್ನು ಜನಗಣತಿ ವೇಳೆಯಲ್ಲಿ ನಮೂದಿಸುವಂತೆ” ತಿಳಿಸಿದರು.

“ಈ ಬಾರಿಯ ಜನಗಣತಿಯು ಸ್ವಾತಂತ್ರ್ಯ ನಂತರ ನಡೆಯುತ್ತಿರುವ 8ನೇ ಜನಗಣತಿಯಾಗಿದ್ದು, ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಗಣತಿಯಾಗಿದೆ. ಸ್ಮಾರ್ಟ್ ಪೋನ್‌ಗಳ ಮೂಲಕ ನಡೆಯುವ ಈ ಜನಗಣತಿಗೆ ಪ್ರತ್ಯೇಕ ಆಪ್ ರಚಿಸಲಾಗಿದ್ದು, ಆಪ್ ನಲ್ಲಿಯೇ ಪ್ರತೀ ಮನೆಯ ಸುಮಾರು 30 ಪ್ರಶ್ನೆಗಳಿಗೆ ಉತ್ತರಗಳನ್ನು ದಾಖಲಿಸಬೇಕಾಗುತ್ತದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಜನಗಣತಿಯು 2 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಏಪ್ರಿಲ್ 1 ರಿಂದ 15 ರ ವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಿದ್ದು, ಏಪ್ರಿಲ್ 16 ರಿಂದ ಮೇ 16 ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ” ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಜೋಯಿಡಾ ಆಯ್ಕೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜೋಯಿಡಾ ತಾಲೂಕಿನಲ್ಲಿ ಪ್ರಾಯೋಗಿಕವಾಗಿ, ಡಿಜಿಟಲ್ ಮೋಡ್ ನಲ್ಲಿ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲವಾಗಿದ್ದು, ಜನಗಣತಿ ಕಾರ್ಯಕ್ಕೆ ನಿಯೋಜಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಗಧಿತ ಅವಧಿಯೊಳಗೆ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ, “ದೇಶದ ಜನಗಣತಿ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ದೊರೆತ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮ ಅಧೀನದ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವಂತೆ” ತಿಳಿಸಿದರು.

ಜನಗಣತಿ ನಿರ್ದೇಶನಾಲಯ, ಬೆಂಗಳೂರಿನ ಜಂಟಿ ನಿರ್ದೇಶಕ ಶಕ್ತಿ ಕುಮಾರ್ ಮಾತನಾಡಿ, “ಜನಗಣತಿಯು ದೇಶದ ಅತಿದೊಡ್ಡ ಸಾರ್ವಜನಿಕ ಅಭ್ಯಾಸ ಚಟುವಟಿಕೆಯಾಗಿದ್ದು, ಕೋವಿಡ್ ಕಾರಣದಿಂದ ಜನಗಣತಿ ಕಾರ್ಯಕ್ಕೆ ವಿಳಂಬವಾಗಿದ್ದು, ಪ್ರಸ್ತುತ ನಡೆಯುವ ಗಣತಿಯು ಸಂಪೂರ್ಣ ಆನ್‌ಲೈನ್ ಮೋಡ್ ನಲ್ಲಿರುವುದದರಿಂದ ತಿದ್ದಪಡಿಗಳನ್ನು ಮಾಡಲು ಅವಕಶವಿಲ್ಲ ಆದ್ದರಿಂದ ಗಣತಿದಾರರು ಅತ್ಯಂತ ಎಚ್ಚರಿಕೆಯಿಂದ ದಾಖಲೆಗಳನ್ನು ನಮೂದಿಸಬೇಕು” ಎಂದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular